image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾ ಕದನಕ್ಕೆ ಭಾರಿ ಕ್ರೇಜ್: ಭಾರತ-ಪಾಕ್ ವಿಶ್ವಕಪ್ ಪಂದ್ಯದ ಟಿಕೆಟ್‌ಗಾಗಿ 84 ಲಕ್ಷ ಜನರ ಮುಗಿಬಿದ್ದ ಅಭಿಮಾನಿಗಳು!

ಮಹಾ ಕದನಕ್ಕೆ ಭಾರಿ ಕ್ರೇಜ್: ಭಾರತ-ಪಾಕ್ ವಿಶ್ವಕಪ್ ಪಂದ್ಯದ ಟಿಕೆಟ್‌ಗಾಗಿ 84 ಲಕ್ಷ ಜನರ ಮುಗಿಬಿದ್ದ ಅಭಿಮಾನಿಗಳು!

ಹೈದರಬಾದ್ : ವಿಶ್ವ ಕ್ರಿಕೆಟ್‌ ಅಂಗಳದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅದೊಂದು ಕೇವಲ ಆಟವಲ್ಲ, ಅದೊಂದು ಎಮೋಷನ್. ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ ಎಂದರೆ ಸಾಕು, ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳ ಧಡಕನ್ ಹೆಚ್ಚಾಗುತ್ತದೆ. 2027ರ ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಹತ್ತು ತಿಂಗಳಿಗೂ ಹೆಚ್ಚಿನ ಸಮಯ ಬಾಕಿ ಇರುವಾಗಲೇ, ಈ ಹೈವೋಲ್ಟೇಜ್ ಕದನದ ಕ್ರೇಜ್ ಗಗನಕ್ಕೇರಿದೆ.

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಈಗಿನಿಂದಲೇ ಕಾತರದಿಂದ ಕಾಯುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆರಂಭಿಸಿರುವ ಅಧಿಕೃತ ಟಿಕೆಟ್ ಲಾಟರಿ (ಬ್ಯಾಲೆಟ್) ಪ್ರಕ್ರಿಯೆಯಲ್ಲಿ ಭಾರತ-ಪಾಕ್ ಪಂದ್ಯಕ್ಕಾಗಿ ಬರೋಬ್ಬರಿ 83.97 ಲಕ್ಷಕ್ಕೂ (ಸುಮಾರು 84 ಲಕ್ಷ) ಹೆಚ್ಚು ಟಿಕೆಟ್ ಅರ್ಜಿಗಳು ಸಲ್ಲಿಕೆಯಾಗಿವೆ.

ಆದರೆ ಈ ಅಭೂತಪೂರ್ವ ಬೇಡಿಕೆಗೆ ಹೋಲಿಸಿದರೆ ಪ್ರೇಕ್ಷಕರ ಆಸನ ಸಾಮರ್ಥ್ಯ ಅತ್ಯಂತ ಕಡಿಮೆಯಿರುವುದು ಆಯೋಜಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಮಹತ್ವದ ಪಂದ್ಯ ನಡೆಯಲಿರುವ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಐತಿಹಾಸಿಕ 'ದಿ ವಾಂಡರರ್ಸ್' ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯ ಕೇವಲ 34,000 ಮಾತ್ರ. ಅಂದರೆ, ಮೈದಾನದಲ್ಲಿ ಲಭ್ಯವಿರುವ ಪ್ರತಿಯೊಂದು ಸೀಟಿಗೂ ಸುಮಾರು 247 ಅಭಿಮಾನಿಗಳು ಪೈಪೋಟಿ ನಡೆಸುತ್ತಿದ್ದಾರೆ.

ವಿಶೇಷವೆಂದರೆ, ಇಡೀ ಟೂರ್ನಿಯ ಮುಕುಟಪ್ರಾಯವಾದ ಫೈನಲ್ ಪಂದ್ಯಕ್ಕಿಂತಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸುಮಾರು 79 ಲಕ್ಷ ಟಿಕೆಟ್ ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಭಾರತ-ಪಾಕ್ ಪಂದ್ಯಕ್ಕೆ 84 ಲಕ್ಷ ಅರ್ಜಿಗಳು ಹರಿದುಬಂದಿವೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತ್ಯಂತ ಹೆಚ್ಚು ಟಿಕೆಟ್ ಬೇಡಿಕೆ ಹೊಂದಿರುವ ಪಂದ್ಯವಾಗಿ ಭಾರತ-ಪಾಕ್ ಕದನ ಮೊದಲ ಸ್ಥಾನ ಪಡೆದುಕೊಂಡಿದೆ.

24 ವರ್ಷಗಳ ಸುದೀರ್ಘ ವಿರಾಮದ ನಂತರ ಆಫ್ರಿಕಾ ಖಂಡಕ್ಕೆ ಏಕದಿನ ವಿಶ್ವಕಪ್ ಮರಳುತ್ತಿದ್ದು, ಜಗತ್ತಿನಾದ್ಯಂತ 193 ದೇಶಗಳಿಂದ 12 ಕೋಟಿಗೂ ಅಧಿಕ ಟಿಕೆಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಐಸಿಸಿಯ ಟಿಕೆಟ್ ನೋಂದಣಿ ಪ್ರಕ್ರಿಯೆಯು ನವೆಂಬರ್ 21, 2026 ರವರೆಗೆ ತೆರೆದಿರಲಿದ್ದು, ನಿಗದಿತ ಸೀಟುಗಳಿಗಿಂತ ಬೇಡಿಕೆ ಅಧಿಕವಾಗಿರುವುದರಿಂದ ಕಂಪ್ಯೂಟರೀಕೃತ ರೇಂಡಮ್ ಲಾಟರಿ ಸಿಸ್ಟಮ್ ಮೂಲಕ ಅದೃಷ್ಟಶಾಲಿ ಅರ್ಜಿದಾರರಿಗೆ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಮೈದಾನದಲ್ಲಿ ಈ ಬದ್ಧ ವೈರಿಗಳ ಹಣಾಹಣಿಯನ್ನು ಕಣ್ಣುಂಬಿಕೊಳ್ಳಲು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

Category
ಕರಾವಳಿ ತರಂಗಿಣಿ