image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬರ ಪರಿಹಾರಕ್ಕಾಗಿ ₹22,400.58 ಕೋಟಿ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಕೆ

ಬರ ಪರಿಹಾರಕ್ಕಾಗಿ ₹22,400.58 ಕೋಟಿ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸಂಕಷ್ಟದಲ್ಲಿರುವ ರೈತರ ಕೈಹಿಡಿಯಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಅಡಿಯಲ್ಲಿ ₹22,400.58 ಕೋಟಿ ಬರ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೂ ಆದ ಡಾ.ಜಿ. ಪರಮೇಶ್ವರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಡಾ.ಜಿ. ಪರಮೇಶ್ವರ ಅವರು ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

ಕರ್ನಾಟಕವು ಈ ಮುಂಗಾರು ಋತುವಿನಲ್ಲಿ ಶೇಕಡಾ 35ರಷ್ಟು ಮಳೆ ಕೊರತೆಯನ್ನು ಎದುರಿಸಿದ್ದು, 1956ರ ನಂತರ ದಾಖಲಾದ ಎರಡನೇ ಅತ್ಯಂತ ಭೀಕರ ಅಭಾವ ಪರಿಸ್ಥಿತಿ ಇದಾಗಿದೆ. ರಾಜ್ಯ ಸರ್ಕಾರವು ಒಟ್ಟು 226 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಬರೋಬ್ಬರಿ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಪಾರ ಹಾನಿಯುಂಟಾಗಿದ್ದು, ಸುಮಾರು ₹62,481.88 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯಕ್ಕೆ ಭಾರಿ ಪೆಟ್ಟು ಬಿದ್ದಿದೆ.

ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ವಿಪತ್ತು ನಿರ್ವಹಣಾ ನಿಧಿಯ ನಿಯಮ ಹಾಗೂ ಇನ್‌ಪುಟ್ ಸಬ್ಸಿಡಿ ಮಾನದಂಡಗಳನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ದರಗಳ ಪ್ರಕಾರ ಕರ್ನಾಟಕಕ್ಕೆ ಬೆಳೆ ಹಾನಿ ಸಹಾಯಧನಕ್ಕಾಗಿ ಹೆಚ್ಚುವರಿಯಾಗಿ ₹1,814.85 ಕೋಟಿ ಅಗತ್ಯವಿದ್ದು, ರಾಜ್ಯದ ಒಟ್ಟು ಪರಿಹಾರ ಬೇಡಿಕೆಯ ಮೊತ್ತವು ₹20,585.73 ಕೋಟಿಯಿಂದ ₹22,400.58 ಕೋಟಿಗೆ ಹೆಚ್ಚಳವಾಗಿದೆ.

ಪರಿಹಾರ ದರಗಳಲ್ಲಿನ ಈ ಹೆಚ್ಚಳವನ್ನು ಸ್ವಾಗತಿಸಿರುವ ಕಂದಾಯ ಸಚಿವರು, ಕೃಷಿ ವೆಚ್ಚ ಹಾಗೂ ಪ್ರಸ್ತುತ ದಿನಗಳ ಬೆಲೆ ಏರಿಕೆಗೆ ಹೋಲಿಸಿದರೆ ಈ ನೆರವು ಇನ್ನೂ ಅಪೂರ್ಣವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ನಿಗದಿಪಡಿಸಿರುವ ಪರಿಹಾರ ಮೊತ್ತವು ರೈತರು ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಮಿಕರ ಕೂಲಿಗೆ ಮಾಡುವ ನೈಜ ವೆಚ್ಚವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರೈತರ ಖಾತೆಗಳಿಗೆ ಸಕಾಲದಲ್ಲಿ ನೇರವಾಗಿ ನೆರವು ತಲುಪಿಸಲು ಮತ್ತು ಅವರಲ್ಲಿ ಮರಳಿ ಆತ್ಮವಿಶ್ವಾಸ ತುಂಬಲು ಕೇಂದ್ರದ ಅನುದಾನ ಅತಿ ಶೀಘ್ರದಲ್ಲಿ ಬಿಡುಗಡೆಯಾಗುವುದು ಅಗತ್ಯವಾಗಿದೆ. ರಾಜ್ಯದ ಪರಿಸ್ಥಿತಿಯ ಗಂಭೀರತೆಯನ್ನು ಖುದ್ದಾಗಿ ವಿವರಿಸಿ, ಪರಿಹಾರದ ಮನವಿ ಸಲ್ಲಿಸಲು ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲು ಕಾಲಾವಕಾಶ ನೀಡಬೇಕೆಂದು ಡಾ. ಪರಮೇಶ್ವರ ಅವರು ಪತ್ರದ ಮೂಲಕ ಕೋರಿದ್ದಾರೆ.

Category
ಕರಾವಳಿ ತರಂಗಿಣಿ