ಮೂಡಬಿದಿರೆ : ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ದೊಡ್ಡಕನ್ನಲ್ಲಿಯ ಸಿಆರ್‌ಆರ್ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡವು ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಂತಿಮ ಫೈನಲ್ ಹಣಾಹಣಿಯಲ್ಲಿ ಮಂಡ್ಯ ಜಿಲ್ಲೆಯ ತಂಡವನ್ನು ಪರಾಭವಗೊಳಿಸಿದ ಆಳ್ವಾಸ್ ಕಾಲೇಜು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಲಾವಣ್ಯ 'ಉತ್ತಮ ಹಿಡಿತಗಾರ್ತಿ' ಹಾಗೂ ವಿಜಯಲಕ್ಷ್ಮಿ 'ಉತ್ತಮ ಓಟಗಾರ್ತಿ' ಬಹುಮಾನಗಳನ್ನು ಪಡೆದುಕೊಂಡರು. ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದು ಪ್ರಶಸ್ತಿ ಮುಡಿಗೇರಿಸಿಕೊಂಡ ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.