ಮುಂಬೈ : ದೇಶಾದ್ಯಂತ ಕೋಟ್ಯಂತರ ರೂಪಾಯಿ ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ ‘ಮಹಾದೇವ್ ಆನ್‌ಲೈನ್ ಬುಕ್’ ಆ್ಯಪ್‌ನ ಮುಖ್ಯ ರೂವಾರಿ ಹಾಗೂ ಕಿಂಗ್‌ಪಿನ್ ಸೌರಭ್ ಚಂದ್ರಾಕರ್‌ನನ್ನು ಒಮನ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಯ (CBI) ವಿಶೇಷ ತಂಡವೊಂದು ಮುಸ್ಕತ್‌ಗೆ ತೆರಳಿ ಆತನನ್ನು ವಶಕ್ಕೆ ಪಡೆದು ಭಾರತಕ್ಕೆ ಕರೆತಂದಿದ್ದು, ಸೋಮವಾರ ರಾಯ್‌ಪುರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಇಂಟರ್‌ಪೋಲ್ ಜಾರಿಗೊಳಿಸಿದ್ದ 'ರೆಡ್ ಕಾರ್ನರ್ ನೋಟಿಸ್' ಆಧಾರದ ಮೇಲೆ ರಾಯಲ್ ಒಮನ್ ಪೊಲೀಸರು ಸೌರಭ್‌ನನ್ನು ಬಂಧಿಸಿದ್ದರು. ಈ ಸಂಬಂಧ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ED) ಒಮನ್ ಸರ್ಕಾರಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿವೆ. ವೈದ್ಯಕೀಯ ತಪಾಸಣೆಯ ನಂತರ ಸಿಬಿಐ ತಂಡ ಟ್ರಾನ್ಸಿಟ್ ರಿಮಾಂಡ್ ಪಡೆದು ಆತನನ್ನು ರಾಯ್‌ಪುರಕ್ಕೆ ಕರೆದೊಯ್ಯಲಿದೆ.
ವಿದೇಶದಿಂದ ನಿಯಂತ್ರಿಸಲ್ಪಡುತ್ತಿದ್ದ ಈ ಅಕ್ರಮ ಜಾಲವು ಭಾರತದಾದ್ಯಂತ ಫ್ರಾಂಚೈಸಿ ಪ್ಯಾನಲ್‌ಗಳು ಮತ್ತು ಬ್ರಾಂಚ್‌ಗಳ ಮೂಲಕ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಹಣ ಸಂಗ್ರಹಿಸುತ್ತಿತ್ತು. ಈ ಹಣವನ್ನು 'ಮ್ಯೂಲ್ ಬ್ಯಾಂಕ್ ಖಾತೆಗಳ' ಮೂಲಕ ವರ್ಗಾಯಿಸಿ ಹವಾಲಾ ಮಾರ್ಗದಲ್ಲಿ ವಿದೇಶಕ್ಕೆ ರವಾನಿಸಲಾಗುತ್ತಿತ್ತು.
ಛತ್ತೀಸ್‌ಗಢ ಸರ್ಕಾರದ ಕೋರಿಕೆಯಂತೆ ತನಿಖೆ ಕೈಗೆತ್ತಿಕೊಂಡ ಸಿಬಿಐ ಈಗಾಗಲೇ ವಿವಿಧ ಕಾಯ್ದೆಗಳಡಿ ಚಾರ್ಜ್‌ಶೀಟ್ ಸಲ್ಲಿಸಿದ್ದರೆ, ಜಾರಿ ನಿರ್ದೇಶನಾಲಯವು ಭಾರತ ಹಾಗೂ ವಿದೇಶದಲ್ಲಿದ್ದ ಸೌರಭ್‌ನ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಒಮನ್ ಸರ್ಕಾರದ ಸಹಾಯದಿಂದ ನಡೆದ ಈ ಯಶಸ್ವಿ ಹಸ್ತಾಂತರ ಪ್ರಕ್ರಿಯೆಗೆ ಸಿಬಿಐ ಮೆಚ್ಚುಗೆ ವ್ಯಕ್ತಪಡಿಸಿದೆ.