image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಷ್ಯನ್ ಪ್ಯಾರಾ ಗೇಮ್ಸ್: 114 ಪದಕ ಗೆದ್ದು ಇತಿಹಾಸ ಬರೆದ ಭಾರತ

ಏಷ್ಯನ್ ಪ್ಯಾರಾ ಗೇಮ್ಸ್: 114 ಪದಕ ಗೆದ್ದು ಇತಿಹಾಸ ಬರೆದ ಭಾರತ

ಹೈದರಾಬಾದ್ : ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಭಾರತವು ಈ ಕ್ರೀಡಾಕೂಟದಲ್ಲಿ 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳೊಂದಿಗೆ ಒಟ್ಟು 114 ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಪೂರ್ಣಗೊಳಿಸಿದೆ. ಇದರೊಂದಿಗೆ, 2023ರ ಚೀನಾದ ಹ್ಯಾಂಗ್‌ಝೌನಲ್ಲಿ 27 ಚಿನ್ನ ಸೇರಿ 108 ಪದಕ ಗೆದ್ದು ನಿರ್ಮಿಸಿದ್ದ ತನ್ನದೇ ಹಿಂದಿನ ದಾಖಲೆಯನ್ನು ಭಾರತೀಯ ಪಡೆ ಮೆಟ್ಟಿ ನಿಂತಿದೆ.

ಈ ಬಾರಿಯ ಕ್ರೀಡಾಕೂಟಕ್ಕೆ ಭಾರತದಿಂದ ಕೇವಲ 168 ಕ್ರೀಡಾಪಟುಗಳ ಸಣ್ಣ ತಂಡ ತೆರಳಿತ್ತು, ಇದು ಕಳೆದ ಆವೃತ್ತಿಗೆ ಹೋಲಿಸಿದರೆ ಅರ್ಧದಷ್ಟಾಗಿದೆ. ಆದರೂ, ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಅತ್ಯಂತ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿ ಅನೇಕ ಸ್ಪರ್ಧೆಗಳಲ್ಲಿ ವಿಶ್ವ ಮತ್ತು ಕ್ರೀಡಾ ದಾಖಲೆಗಳನ್ನು ಬರೆದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಅತ್ಯಂತ ಗರಿಷ್ಠ ಅಂದರೆ 65 ಪದಕಗಳನ್ನು ಗಳಿಸಿದ್ದು, ಇದು ಕಳೆದ ಬಾರಿಗಿಂತ 12 ಪದಕ ಹೆಚ್ಚಾಗಿದೆ. ಅಥ್ಲೆಟಿಕ್ಸ್ ಹೊರತಾಗಿ ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ ಮತ್ತು ಶೂಟಿಂಗ್ ಸ್ಪರ್ಧೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಅದ್ಭುತ ಯಶಸ್ಸು ಕಂಡಿದ್ದಾರೆ.

ಶುಕ್ರವಾರದಂದು ಭಾರತವು ಒಂದೇ ದಿನದಲ್ಲಿ 9 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡಾಕೂಟದ ಅತ್ಯುತ್ತಮ ದಿನವನ್ನಾಗಿ ಮಾಡಿಕೊಂಡಿತು. ಈ ದಿನ ಬ್ಯಾಡ್ಮಿಂಟನ್‌ನಲ್ಲಿ ಮೂರು ಚಿನ್ನದ ಪದಕಗಳು ಬಂದಿದ್ದು, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್‌ಗಳಾದ ನಿತೇಶ್ ಕುಮಾರ್ ಮತ್ತು ನವೀನ್ ಶಿವಕುಮಾರ್ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಶೂಟರ್ ಮೋನಾ ಅಗರ್ವಾಲ್ ಕೂಡ ಪದಕಗಳ ಬೇಟೆಯಲ್ಲಿ ಪ್ರಮುಖ ಕೊಡುಗೆ ನೀಡಿದರು. ಕ್ರೀಡಾಕೂಟದ ಅಂತಿಮ ದಿನದಂದು ಭಾರತದ ಯಾವುದೇ ಅಥ್ಲೀಟ್‌ಗಳ ಸ್ಪರ್ಧೆ ಇರಲಿಲ್ಲ.

ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ ಶೂಟರ್ ಮೋನಾ ಅಗರ್ವಾಲ್ ಮತ್ತು ಅಥ್ಲೀಟ್ ನಿಶಾದ್ ಕುಮಾರ್ ಭಾರತದ ಧ್ವಜಧಾರಿಗಳಾಗಿ ಭಾರತೀಯ ತಂಡವನ್ನು ಮುನ್ನಡೆಸಿದರು.

Category
ಕರಾವಳಿ ತರಂಗಿಣಿ