ಹಿರಿಯೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ವಿವಿ ಸಾಗರ (ವಾಣಿ ವಿಲಾಸ ಸಾಗರ) ಜಲಾಶಯದಿಂದ ಕೇವಲ ಹತ್ತು ತಿಂಗಳ ಅವಧಿಯಲ್ಲಿ ಸುಮಾರು 11 ಟಿಎಂಸಿಯಷ್ಟು ನೀರು ಹೊರಹರಿದಿದ್ದು, ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಬಾರಿ ಜಲಾನಯನ ಪ್ರದೇಶದಲ್ಲಿ ಸೂಕ್ತ ಮಳೆಯಾಗದೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿರುವುದೇ ಈ ಅಭಾವಕ್ಕೆ ಮುಖ್ಯ ಕಾರಣವಾಗಿದೆ. ಜಲಾಶಯಕ್ಕೆ ಹೊಸದಾಗಿ ಹನಿ ನೀರೂ ಹರಿದು ಬರದಿದ್ದರೂ, ಅಚ್ಚುಕಟ್ಟು ಪ್ರದೇಶದ ಕೃಷಿ, ತೋಟಗಾರಿಕೆ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ನಿರಂತರವಾಗಿ ನೀರನ್ನು ಬಿಡಲಾಗುತ್ತಿದೆ.
ಅಚ್ಚುಕಟ್ಟು ಪ್ರದೇಶದ ತೋಟಗಳ ರಕ್ಷಣೆಗೆ ಹಾಗೂ ಕೃಷಿ ಬೆಳೆಗಳಿಗೆ ಅನುಕೂಲವಾಗುವಂತೆ ರೈತರ ಬೇಡಿಕೆಯ ಮೇರೆಗೆ ಎರಡು ಹಂತಗಳಲ್ಲಿ ಕ್ರಮವಾಗಿ 1.87 ಟಿಎಂಸಿ ಮತ್ತು 2.297 ಟಿಎಂಸಿ ನೀರನ್ನು ಹರಿಸಲಾಗಿದೆ. ಇದಲ್ಲದೆ ವೇದಾವತಿ ಹಾಗೂ ಸುವರ್ಣಮುಖಿ ನದಿಪಾತ್ರಗಳ ಮೂಲಕ ಹಿರಿಯೂರು ಮತ್ತು ಚಳ್ಳಕೆರೆ ಭಾಗದ ಒಟ್ಟು 25ಕ್ಕೂ ಹೆಚ್ಚು ಬ್ಯಾರೇಜ್‌ಗಳನ್ನು ತುಂಬಿಸಲು 1 ಟಿಎಂಸಿಗೂ ಹೆಚ್ಚು ನೀರು ಬಳಸಲಾಗಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ನಗರ ಪ್ರದೇಶಗಳು ಸೇರಿದಂತೆ ಡಿಆರ್‌ಡಿಒ, ಐಎಎಸ್‌ಸಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನಿತ್ಯ ಸುಮಾರು 32.156 ಕ್ಯುಸೆಕ್ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಕಳೆದ ವರ್ಷ ಎತ್ತಿನಹೊಳೆ, ಭದ್ರಾ ಮತ್ತು ಉತ್ತಮ ಮಳೆಯಿಂದಾಗಿ ಒಂದೇ ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದು ಜಲಸಮೃದ್ಧಿಯಿಂದ ಕಂಗೊಳಿಸುತ್ತಿದ್ದ ಡ್ಯಾಂನಲ್ಲಿ, ಪ್ರಸ್ತುತ 116.65 ಅಡಿ (19.932 ಟಿಎಂಸಿ) ನೀರು ಮಾತ್ರ ಸಂಗ್ರಹವಿದೆ. ಇದರಲ್ಲಿ ಬಳಕೆಗೆ ಸಿಗುವುದು 18.062 ಟಿಎಂಸಿ ನೀರು ಮಾತ್ರ. ಹೀಗೆಯೇ ಒಳಹರಿವಿಲ್ಲದೆ ಬರೀ ಹೊರಹರಿವು ಮುಂದುವರಿದರೆ, ಮುಂಬರುವ ಬೇಸಿಗೆಯ ಕೊನೆಯ ವೇಳೆಗೆ ತೀವ್ರ ನೀರಿನ ಅಭಾವ ಎದುರಾಗಿ ಜಲಾಶಯ ಮರಳಿ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪುವ ಭೀತಿ ಎದುರಾಗಿದೆ.