image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

2030ರ ವೇಳೆಗೆ ವಿಪತ್ತು ನಿರ್ವಹಣೆಯಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಗುರಿ: ಡಿಸಿಎಂ ಜಿ. ಪರಮೇಶ್ವರ

2030ರ ವೇಳೆಗೆ ವಿಪತ್ತು ನಿರ್ವಹಣೆಯಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಗುರಿ: ಡಿಸಿಎಂ ಜಿ. ಪರಮೇಶ್ವರ

ಬೆಂಗಳೂರು: ಪ್ರಕೃತಿ ವಿಕೋಪಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿದ್ದರೂ, ಮುನ್ನೆಚ್ಚರಿಕೆ, ವೈಜ್ಞಾನಿಕ ಯೋಜನೆ ಹಾಗೂ ಜನಜಾಗೃತಿಯ ಮೂಲಕ ಅವುಗಳಿಂದ ಉಂಟಾಗುವ ಕಷ್ಟನಷ್ಟಗಳನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ವಿಪತ್ತು ಅಪಾಯ ತಗ್ಗಿಸುವ ರಾಜ್ಯ ವೇದಿಕೆಯ ಮೊದಲ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 2030ರ ವೇಳೆಗೆ ಕರ್ನಾಟಕವನ್ನು ವಿಪತ್ತು ಅಪಾಯಗಳಿಂದ ಮುಕ್ತಗೊಳಿಸಿ ದೇಶಕ್ಕೇ ಮಾದರಿ ರಾಜ್ಯವನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದರು.

ಕೇವಲ ವಿಪತ್ತು ಸಂಭವಿಸಿದ ನಂತರ ರಕ್ಷಣೆ ಮತ್ತು ಪರಿಹಾರ ವಿತರಣೆಗೆ ಸೀಮಿತವಾಗದೆ, ವಿಪತ್ತು ಸಂಭವಿಸುವ ಮೊದಲೇ ಅಪಾಯಗಳನ್ನು ಗುರುತಿಸಿ ಜೀವ ಹಾಗೂ ಜೀವನೋಪಾಯವನ್ನು ರಕ್ಷಿಸುವ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಪ್ರಗತಿ ಅಥವಾ ಮೂಲಸೌಕರ್ಯ ನಿರ್ಮಾಣವಲ್ಲ, ಜನರ ಸುರಕ್ಷತೆಯೂ ಅದರ ಪ್ರಮುಖ ಮಾನದಂಡವಾಗಬೇಕು ಎಂದು ಅವರು ಪ್ರತಿಪಾದಿಸಿದರು.

ರಾಜ್ಯದಲ್ಲಿ ಬರಗಾಲ, ಅತಿವೃಷ್ಟಿ, ಪ್ರವಾಹ, ಭೂಕುಸಿತ ಹಾಗೂ ಕರಾವಳಿ ಪ್ರದೇಶಗಳ ನೈಸರ್ಗಿಕ ಸವಾಲುಗಳು ಹೆಚ್ಚುತ್ತಿದ್ದು, ನಗರೀಕರಣ ಮತ್ತು ಹವಾಮಾನ ಬದಲಾವಣೆ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸುತ್ತಿವೆ. ಆದ್ದರಿಂದ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವ ಹಂತದಲ್ಲೇ ಭವಿಷ್ಯದ ವಿಪತ್ತು ಅಪಾಯಗಳ ಮೌಲ್ಯಮಾಪನ ಕಡ್ಡಾಯಗೊಳಿಸಬೇಕು ಎಂದು ಸೂಚಿಸಿದರು.

ವಿಪತ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅತ್ಯಧುನಿಕಗೊಳಿಸಲು ಕೃತಕ ಬುದ್ಧಿಮತ್ತೆ (AI), ಉಪಗ್ರಹ ಚಿತ್ರಣ ಹಾಗೂ ವೈಜ್ಞಾನಿಕ ಮುನ್ಸೂಚನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಹಿತಿಯನ್ನು ಜಿಲ್ಲಾಡಳಿತ, ಗ್ರಾಮ ಪಂಚಾಯತ್‌ಗಳು ಹಾಗೂ ಅಪಾಯಕ್ಕೆ ಒಳಗಾಗುವ ಪ್ರತಿ ಕುಟುಂಬಕ್ಕೂ ಸಕಾಲದಲ್ಲಿ ತಲುಪಿಸುವ ಬಲವಾದ ವ್ಯವಸ್ಥೆ ರೂಪಿಸಬೇಕು ಎಂದು ಡಾ. ಜಿ. ಪರಮೇಶ್ವರ ನಿರ್ದೇಶನ ನೀಡಿದರು.

Category
ಕರಾವಳಿ ತರಂಗಿಣಿ