image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಸ್‌ಐಆರ್‌ ವಿರೋಧದ ಹಿಂದೆ ಕಾಂಗ್ರೆಸ್‌ ದುರುದ್ದೇಶ: ಸಿ.ಟಿ. ರವಿ

ಎಸ್‌ಐಆರ್‌ ವಿರೋಧದ ಹಿಂದೆ ಕಾಂಗ್ರೆಸ್‌ ದುರುದ್ದೇಶ: ಸಿ.ಟಿ. ರವಿ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ದುರುದ್ದೇಶಪೂರಿತ ರಾಜಕೀಯ ಆರೋಪ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆರೋಪಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರಂಭವಾದುದಲ್ಲ. ನೆಹರು, ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ನೇತೃತ್ವದ ಅವಧಿಯಲ್ಲೂ ಈ ಪ್ರಕ್ರಿಯೆ ನಡೆದಿದ್ದು, ಸಂವಿಧಾನದ ವಿಧಿ 324 ಹಾಗೂ ಜನಪ್ರತಿನಿಧಿತ್ವ ಕಾಯ್ದೆ 1950ರ ಸೆಕ್ಷನ್ 21ರ ಅಡಿಯಲ್ಲಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಕೆಲಸ ನಡೆಯುತ್ತಿದೆ ಎಂದರು.

ಈ ಪ್ರಕ್ರಿಯೆಯನ್ನು ಸಿಬಿಐ ಅಥವಾ ಇಡಿ ನಡೆಸುತ್ತಿಲ್ಲ; ರಾಜ್ಯ ಸರ್ಕಾರದ ಅಧೀನದಲ್ಲಿರುವ ಶಾಲಾ ಶಿಕ್ಷಕರು, ಕಂದಾಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೇ ಬೂತ್ ಲೆವೆಲ್ ಆಫೀಸರ್‌ಗಳಾಗಿ (ಬಿಎಲ್‌ಒ) ಕಾರ್ಯನಿರ್ವಹಿಸುತ್ತಿದ್ದಾರೆ. ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ನಕಲಿ ಮತದಾರರನ್ನು ಗುರುತಿಸಿ ಫಾರಂ 6 ಮತ್ತು 7ರ ಮೂಲಕ ದೂರು ಅಥವಾ ಆಕ್ಷೇಪಣೆ ಸಲ್ಲಿಸುವುದು ಪ್ರಜೆಗಳ ಮತ್ತು ಕಾರ್ಯಕರ್ತರ ಕೆಲಸ. ಆದರೆ ಬಂದ ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಹೆಸರು ಉಳಿಸಬೇಕೇ ಅಥವಾ ತೆಗೆಯಬೇಕೇ ಎಂಬುದನ್ನು ನಿರ್ಧರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬೆಳಗಾವಿ ಉತ್ತರ ಕ್ಷೇತ್ರ ಸೇರಿದಂತೆ ಹಲವೆಡೆ ಕಂಡುಬಂದಿರುವ ವಯಸ್ಸಿನ ವ್ಯತ್ಯಾಸ ಹಾಗೂ ಅಕ್ರಮ ಮತದಾರರ ಬಗ್ಗೆ ದೂರು ನೀಡಿದರೆ, ದೂರು ನೀಡಿದವರನ್ನೇ ಗುರಿಯಾಗಿಸುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಕಾಫಿ ತೋಟಗಳಲ್ಲಿ ಅಕ್ರಮವಾಗಿ ನೆಲೆಸಿರುವವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂಬ ಆರೋಪಗಳಿದ್ದು, ಆಂತರಿಕ ಭದ್ರತೆಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ರವಿ ಆಗ್ರಹಿಸಿದರು. ಇದೇ ವೇಳೆ ಕಾಂಗ್ರೆಸ್‌ನ ಇವಿಎಂ ಹ್ಯಾಕಿಂಗ್ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಇವಿಎಂ ಹ್ಯಾಕ್ ಮಾಡಲು ಸಾಧ್ಯ ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವಂತೆ ಸವಾಲು ಹಾಕಿದರು. ಕಾಂಗ್ರೆಸ್ ಗೆಲುವು ಸಾಧಿಸಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಗಳ ಚುನಾವಣೆಗಳನ್ನು ಕಾಂಗ್ರೆಸ್ ಹೇಗೆ ಸಮರ್ಥಿಸುತ್ತದೆ ಎಂದು ಪ್ರಶ್ನಿಸಿದ ಅವರು, ಆಧಾರರಹಿತ ಆರೋಪಗಳ ಮೂಲಕ ಸಂವಿಧಾನಾತ್ಮಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸಬಾರದು ಎಂದರು.

ಹೈಕೋರ್ಟ್ ನೇಮಿಸಿದ ಎಸ್‌ಐಟಿ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದನ್ನು ಉಲ್ಲೇಖಿಸಿದ ಅವರು, ಕೆಪಿಎಸ್‌ಸಿ ಅಕ್ರಮದಲ್ಲಿ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಸಚಿವರ ಹೆಸರುಗಳು ಕೇಳಿಬರುತ್ತಿರುವ ಭಯದಿಂದಲೇ ಸರ್ಕಾರ ಮೇಲ್ಮನವಿ ಸಲ್ಲಿಸಿದೆ ಎಂದು ಆರೋಪಿಸಿದರು. ಕೆಪಿಎಸ್‌ಸಿ ಅಕ್ರಮ ಹಾಗೂ ನೈಸ್ ಯೋಜನೆಯಂತಹ ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಎಸ್‌ಐಆರ್ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದು ರವಿ ದೂರಿದರು.

Category
ಕರಾವಳಿ ತರಂಗಿಣಿ