image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಆಂಧ್ರಪ್ರದೇಶದಲ್ಲಿ ದೇಶದಲ್ಲೇ ಮೊದಲ ಬಾರಿಗೆ 3D ಕಾಂಕ್ರೀಟ್ ಪ್ರಿಂಟಿಂಗ್ ಮನೆಗಳ ನಿರ್ಮಾಣ!

ಆಂಧ್ರಪ್ರದೇಶದಲ್ಲಿ ದೇಶದಲ್ಲೇ ಮೊದಲ ಬಾರಿಗೆ 3D ಕಾಂಕ್ರೀಟ್ ಪ್ರಿಂಟಿಂಗ್ ಮನೆಗಳ ನಿರ್ಮಾಣ!

ಅಮರಾವತಿ: ನಿರ್ಮಾಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರವು, ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ವಸತಿ ಯೋಜನೆಯಡಿ 3D ಕಾಂಕ್ರೀಟ್ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ 2.0ರ (PMAY-G 2.0) ಅಡಿಯಲ್ಲಿ ಗುಂಟೂರು ಜಿಲ್ಲೆಯ ತೆನಾಲಿ ಕ್ಷೇತ್ರದ ಬುರಿಪಾಲೆಮ್ ಗ್ರಾಮದಲ್ಲಿ ಪ್ರಾಯೋಗಿಕವಾಗಿ 100 ಮನೆಗಳನ್ನು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (CBRI) ನಿರ್ಮಿಸಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಅಕ್ಟೋಬರ್ 4 ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಉಪಸ್ಥಿತಿಯಲ್ಲಿ ರಾಜ್ಯ ವಸತಿ ಇಲಾಖೆ, ಕೇಂದ್ರ ಸರ್ಕಾರ ಹಾಗೂ ಸಿಬಿಆರ್‌ಐ ನಡುವೆ ಅಧಿಕೃತ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ವರದಿಯಾಗಿದೆ.

ಪಿಎಂಎವೈ-ಜಿ ಮಾರ್ಗಸೂಚಿಯಂತೆ ಪ್ರತಿಯೊಂದು ಮನೆಯನ್ನು 325 ಚದರ ಅಡಿ ವಿಸ್ತೀರ್ಣದಲ್ಲಿ ಭಾರತೀಯ ವಾತಾವರಣಕ್ಕೆ ಹೊಂದುವಂತೆ ಸಿಬಿಆರ್‌ಐ ಅಭಿವೃದ್ಧಿಪಡಿಸಿದ ವಿಶೇಷ ವಿನ್ಯಾಸದೊಂದಿಗೆ ನಿರ್ಮಿಸಲಾಗುವುದು. ಈ ವಿನೂತನ ತಂತ್ರಜ್ಞಾನಕ್ಕೆ ತಗುಲುವ ಹೆಚ್ಚುವರಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಭರಿಸಲಿದ್ದು, ಫಲಾನುಭವಿಗಳಿಗೆ ಸಾಮಾನ್ಯ ಯೋಜನೆಯ ಸೌಲಭ್ಯದ ಜೊತೆಗೆ ಹೆಚ್ಚುವರಿ ಆರ್ಥಿಕ ನೆರವು ಸಿಗಲಿದೆ.

ಈ 3D ಕಾಂಕ್ರೀಟ್ ಪ್ರಿಂಟಿಂಗ್ ತಂತ್ರಜ್ಞಾನವು ಅತ್ಯಾಧುನಿಕ ರೋಬೋಟಿಕ್ಸ್ ಆಧಾರಿತವಾಗಿದ್ದು, ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ 3D ಕ್ಯಾಡ್ (CAD) ವಿನ್ಯಾಸದ ಸೂಚನೆಯಂತೆ ರೋಬೋಟಿಕ್ ನಳಿಕೆಯ ಮೂಲಕ ಕಾಂಕ್ರೀಟ್ ಮಿಶ್ರಣವನ್ನು ಪದರಗಳನ್ನಾಗಿ ಸುರಿದು ಗೋಡೆಗಳನ್ನು ಸಿದ್ಧಪಡಿಸುತ್ತದೆ. ಈ ಪದರಗಳು ತಕ್ಷಣವೇ ಗಟ್ಟಿಯಾಗಿ ಮುಂದಿನ ಹಂತದ ತೂಕವನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತವೆ.

ಸಂಪ್ರದಾಯಿಕ ನಿರ್ಮಾಣ ವಿಧಾನಕ್ಕೆ ಹೋಲಿಸಿದರೆ ಈ ಆಧುನಿಕ ಪದ್ಧತಿಯಿಂದ ಕಟ್ಟಡ ನಿರ್ಮಾಣ ಕಾರ್ಯವು ಶೇಕಡಾ 50 ರಿಂದ 70 ರಷ್ಟು ವೇಗವಾಗಿ ಪೂರ್ಣಗೊಳ್ಳಲಿದೆ. ಯಾವುದೇ ಸೆಂಟರಿಂಗ್ ಉಪಕರಣಗಳ ಅಗತ್ಯವಿಲ್ಲದ ಈ ವಿಧಾನದಲ್ಲಿ ಕಟ್ಟಡ ಸಾಮಗ್ರಿಗಳ ವ್ಯರ್ಥವಾಗುವಿಕೆ ಶೇಕಡಾ 30 ರಿಂದ 60 ರಷ್ಟು ಕಡಿಮೆಯಾಗುತ್ತದೆ. ಇದಲ್ಲದೆ ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಹಾಗೂ ಬಲವಾದ ಮನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಬಹುದಾಗಿದೆ.

Category
ಕರಾವಳಿ ತರಂಗಿಣಿ