image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಸಿಸಿ ಕ್ರಿಕೆಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ: ಅಕ್ಟೋಬರ್ 1 ರಿಂದ ಹೊಸ ನಿಯಮ ಜಾರಿ

ಐಸಿಸಿ ಕ್ರಿಕೆಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ: ಅಕ್ಟೋಬರ್ 1 ರಿಂದ ಹೊಸ ನಿಯಮ ಜಾರಿ

ಹೈದರಬಾದ್ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಕ್ರಿಕೆಟ್‌ನ ಹಲವು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಹೊಸದಾಗಿ ಆರಂಭವಾಗುವ ಸರಣಿಗಳಿಂದ ಜಾರಿಗೆ ಬರಲಿರುವ ಈ ನಿಯಮಗಳು ಪುರುಷರ, ಮಹಿಳೆಯರ ಹಾಗೂ ಜೂನಿಯರ್ ಕ್ರಿಕೆಟ್ ಪಂದ್ಯಗಳಿಗೆ ಅನ್ವಯವಾಗಲಿದ್ದು, ಈಗಾಗಲೇ ನಡೆಯುತ್ತಿರುವ ಸರಣಿಗಳಿಗೆ ಹಳೆಯ ನಿಯಮಗಳೇ ಮುಂದುವರಿಯಲಿವೆ.

ಹಗಲಿನ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಬೆಳಕಿನಿಂದ ಆಟಕ್ಕೆ ಅಡಚಣೆಯಾಗುವುದನ್ನು ತಪ್ಪಿಸಲು ಪ್ರಾಯೋಗಿಕವಾಗಿ ಗುಲಾಬಿ ಚೆಂಡನ್ನು (Pink Ball) ಬಳಸಲು ಅನುಮತಿ ನೀಡಲಾಗಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಎರಡೂ ತಂಡಗಳು ಇದಕ್ಕೆ ಸಮ್ಮತಿಸಬೇಕು ಹಾಗೂ ಪಂದ್ಯ ಪ್ರಾರಂಭವಾದ ನಂತರ ಇದನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಇದರೊಂದಿಗೆ ಪುರುಷರು, ಮಹಿಳೆಯರು ಮತ್ತು ಜೂನಿಯರ್ ಕ್ರಿಕೆಟ್‌ಗೆ ಬಳಸುವ ಚೆಂಡಿನ ಗಾತ್ರ ಹಾಗೂ ತೂಕಕ್ಕೆ ವಿಭಿನ್ನ ಮಿತಿಗಳನ್ನು ನಿಗದಿಪಡಿಸಲಾಗಿದೆ. ಪುರುಷರ ಪಂದ್ಯಗಳಲ್ಲಿ 156 ರಿಂದ 163 ಗ್ರಾಂ ತೂಕ ಹಾಗೂ 22.4 ರಿಂದ 22.9 ಸೆಂಟಿಮೀಟರ್ ಅಳತೆಯ ಚೆಂಡನ್ನು ಬಳಸಿದರೆ, ಮಹಿಳೆಯರ ಪಂದ್ಯದಲ್ಲಿ 142 ರಿಂದ 149 ಗ್ರಾಂ ತೂಕ ಮತ್ತು 21.5 ರಿಂದ 22 ಸೆಂಟಿಮೀಟರ್ ಅಳತೆಯ ಚೆಂಡನ್ನು ಬಳಸಲಾಗುತ್ತದೆ.

ಫೀಲ್ಡಿಂಗ್ ಮತ್ತು ವಿಕೆಟ್ ಪತನದ ನಿಯಮಗಳಲ್ಲೂ ಕೆಲ ಸ್ಪಷ್ಟನೆಗಳನ್ನು ನೀಡಲಾಗಿದೆ. ರನ್ ತಡೆಯುವ ಅಥವಾ ರನ್ ಔಟ್ ಮಾಡುವ ಉದ್ದೇಶದಿಂದ ಸ್ಟಂಪ್ ಕಡೆಗೆ ಎಸೆದ ಚೆಂಡು ಮಿಸ್ ಆದಲ್ಲಿ ಮಾತ್ರ ಅದನ್ನು ಓವರ್‌ಥ್ರೋ ಎಂದು ಪರಿಗಣಿಸಲಾಗುತ್ತದೆ. ಕೇವಲ ಮಿಸ್ ಫೀಲ್ಡ್ ಅಥವಾ ಸಹ ಆಟಗಾರನಿಗೆ ಚೆಂಡು ಪಾಸ್ ಮಾಡುವಾಗ ಆಗುವ ದೋಷಗಳನ್ನು ಓವರ್‌ಥ್ರೋ ಎಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ರನ್ ಔಟ್ ಅಥವಾ ಸ್ಟಂಪಿಂಗ್ ವೇಳೆ ಕೇವಲ ಕೈ ಅಥವಾ ಗ್ಲೌಸ್‌ನಿಂದ ಚೆಂಡನ್ನು ಮುಟ್ಟಿದರೆ ಸಾಕಾಗುವುದಿಲ್ಲ, ಫೀಲ್ಡರ್ ಅಥವಾ ವಿಕೆಟ್‌ಕೀಪರ್ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ ಮಾತ್ರ ಔಟ್ ನೀಡಲಾಗುತ್ತದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ದಿನದ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದ ತಕ್ಷಣ ಆಟವನ್ನು ಅಂತ್ಯಗೊಳಿಸುವ ನಿಯಮವನ್ನು ಬದಲಾಯಿಸಲಾಗಿದೆ; ಮೈದಾನ ಹಾಗೂ ಹವಾಮಾನ ಸೂಕ್ತವಾಗಿದ್ದರೆ ಉಳಿದ ಎಸೆತಗಳನ್ನು ಅದೇ ದಿನ ಪೂರ್ಣಗೊಳಿಸಬೇಕಾಗುತ್ತದೆ. ಇನ್ನು ಏಕದಿನ ಮತ್ತು ಟಿ20 ಪಂದ್ಯಗಳ ಪಾನೀಯ ವಿರಾಮದ ವೇಳೆ ಮುಖ್ಯ ತರಬೇತುದಾರರು ಮೈದಾನಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ. ಟಿ20 ಪಂದ್ಯಗಳ ಇನಿಂಗ್ಸ್ ನಡುವೆ 15 ನಿಮಿಷಗಳ ನಿಗದಿತ ವಿರಾಮವಿರಲಿದ್ದು, ಅಗತ್ಯ ಬಿದ್ದಾಗ ಇದನ್ನು 10 ನಿಮಿಷಕ್ಕೆ ಇಳಿಸಬಹುದಾಗಿದೆ.

ಪರಿಷ್ಕೃತ ನಿಯಮದಂತೆ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಬ್ಯಾಟರ್ ಎಸೆತದ ಸಮಯದಲ್ಲಿ ಹೊಂದುವ ಸ್ಥಾನಕ್ಕೆ ಅನುಗುಣವಾಗಿ ಲೆಗ್-ಸೈಡ್ ವೈಡ್‌ಗಳನ್ನು ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಬ್ಯಾಟರ್‌ಗಳು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ನಿಯಮ ಬಿಗಿಗೊಳಿಸಲಾಗಿದ್ದು, ನಿಗದಿತ ಸಮಯದಲ್ಲಿ ಬ್ಯಾಟರ್ ಆಡಲು ಸಿದ್ಧರಾಗದಿದ್ದರೆ ಮೊದಲ ಮತ್ತು ಎರಡನೇ ಬಾರಿಗೆ ಎಚ್ಚರಿಕೆ ನೀಡಲಾಗುತ್ತದೆ. ಮೂರನೇ ಬಾರಿಯೂ ಸಮಯ ವಿಳಂಬ ಮಾಡಿದರೆ ಫೀಲ್ಡಿಂಗ್ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡುವ ನಿಬಂಧನೆಯನ್ನು ಸೇರಿಸಲಾಗಿದೆ.

Category
ಕರಾವಳಿ ತರಂಗಿಣಿ