image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಡುಬಿದ್ರಿ ಬಳಿ ಸಮುದ್ರದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಈಶ್ವರ್ ಮಲ್ಪೆ

ಪಡುಬಿದ್ರಿ ಬಳಿ ಸಮುದ್ರದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಈಶ್ವರ್ ಮಲ್ಪೆ

ಪಡುಬಿದ್ರಿ : ಪಡುಬಿದ್ರಿಯ ಕಡಲತೀರದಲ್ಲಿ ನಡು ಮಧ್ಯಾಹ್ನ ಸಮುದ್ರಕ್ಕಿಳಿದು ಸತತ 3 ಗಂಟೆಗಳ ಕಾಲ ಈಜಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರನ್ನು ಪ್ರಸಿದ್ಧ ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಯಶಸ್ವಿಯಾಗಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಕಾಡಿಪಟ್ಣ ನಿವಾಸಿ ಹಾಗೂ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನ ಮಾಜಿ ಲೈಫ್ ಗಾರ್ಡ್ ಯತೀಶ್ (38) ಎಂದು ಗುರುತಿಸಲಾಗಿದೆ. ಈ ಹಿಂದೆಯೂ ಒಂದೆರಡು ಬಾರಿ ಅವರು ಇಂತಹ ಸಾಹಸಕ್ಕೆ ಮುಂದಾಗಿದ್ದಾಗ ಸ್ಥಳೀಯರು ರಕ್ಷಿಸಿದ್ದರು.

ಭಾನುವಾರ ಮಧ್ಯಾಹ್ನ ಕರಾವಳಿ ನಿವಾಸಿಗಳು ನೋಡನೋಡುತ್ತಿದ್ದಂತೆಯೇ ಯತೀಶ್ ಸಮುದ್ರಕ್ಕೆ ಇಳಿದಿದ್ದರು. ಸ್ಥಳಕ್ಕೆ ಆಗಮಿಸಿದ ಕಾಪುವಿನ ಭೈರವಿ ದೋಣಿಯ ಮೀನುಗಾರರು ಅವರನ್ನು ದೋಣಿಗೆ ಎಳೆದುಕೊಳ್ಳಲು ಅರ್ಧ ಗಂಟೆಗೂ ಹೆಚ್ಚು ಕಾಲ ಶ್ರಮಿಸಿದರೂ ಫಲ ಸಿಗಲಿಲ್ಲ. ತಕ್ಷಣವೇ ಪಡುಬಿದ್ರಿಯ ಸದಾಶಿವ ಅವರು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಮಾಹಿತಿ ನೀಡಿದ್ದು, ಶಾಸಕರು ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿ ರಕ್ಷಣೆಗೆ ಕೋರಿದರು.

ಮಧ್ಯಾಹ್ನ 2:15ರ ವೇಳೆಗೆ ಪಡುಬಿದ್ರಿ ಕಡಲತೀರಕ್ಕೆ ಆಗಮಿಸಿದ ಈಶ್ವರ್ ಮಲ್ಪೆ, ಸಮುದ್ರಕ್ಕಿಳಿದು ಸುಮಾರು ಮೂರು ಮಾರು ದೂರ ಈಜಿ ತೆರಳಿ ಮಾನವೀಯ ಮಾತುಗಳಿಂದ ಯತೀಶ್ ಅವರ ಮನವೊಲಿಸಿದರು. ಬಳಿಕ ಬ್ಲೂ ಫ್ಲ್ಯಾಗ್ ಬೀಚ್‌ನ ಲೈಫ್ ಗಾರ್ಡ್‌ಗಳಾದ ಪ್ರಜ್ವಲ್, ಸುಶಾಂತ್ ಮತ್ತು ಬಾದಲ್ ಅವರ ಸಹಕಾರದೊಂದಿಗೆ ಮಧ್ಯಾಹ್ನ 3:15ರ ವೇಳೆಗೆ ಸುರಕ್ಷಿತವಾಗಿ ದಡಕ್ಕೆ ಕರೆತಂದರು.

ಸಾಹಸಿಕ ರಕ್ಷಣಾ ಕಾರ್ಯಾಚರಣೆ ನಡೆಸಿದ ಈಶ್ವರ್ ಮಲ್ಪೆ ಅವರಿಗೆ ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್ ಊರಿನ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ರಕ್ಷಿಸಲ್ಪಟ್ಟ ಯತೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಡಾ. ಎ.ವಿ. ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ತುರ್ತು ರಕ್ಷಣೆಗೆ ಕರಾವಳಿ ಕಾವಲು ಪಡೆಯಲ್ಲಿ ಸ್ಪೀಡ್ ಬೋಟ್ ಇಲ್ಲದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ