ಮಂಗಳೂರು: ಮಕ್ಕಳಲ್ಲಿ ಏಕಾಗ್ರತೆ, ಸಂಯಮ ಮತ್ತು ಜ್ಞಾನಶಕ್ತಿ ಬೆಳೆಸಲು ಚೆಸ್ ಆಟ ಅತ್ಯಂತ ಸಹಕಾರಿಯಾಗಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿರ್ದೇಶಕ ಹಾಗೂ ವಕೀಲ ರಾಘವೇಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾ ಭವನದಲ್ಲಿ ಕಿಂಗ್ಸ್ ಚೆಸ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ 13ನೇ ಕೆಸಿಎ ಟ್ರೋಫಿ ಆಲ್ ಇಂಡಿಯಾ ಮುಕ್ತ ಫಿಡೆ ರೇಟಿಂಗ್ ಚೆಸ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಚೆಸ್ ಎಂಬುದು ಬೌದ್ಧಿಕ ಶಕ್ತಿಯ ಆಟವಾಗಿದ್ದು, ಆಳವಾದ ಯೋಚನೆ ಮತ್ತು ತಂತ್ರಗಾರಿಕೆಯಿಂದ ಇಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಅಮೀನ್ ಕೋಡಿಕಲ್ ಮಾತನಾಡಿ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗಳಲ್ಲಿ ಬಾಲ್ಯದಿಂದಲೇ ಅವರು ತೊಡಗಿಸಿಕೊಳ್ಳಲು ಹೆತ್ತವರು ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಟೂರ್ನಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಿಂಗ್ಸ್ ಚೆಸ್ ಅಕಾಡೆಮಿಯ ತರಬೇತುದಾರ ಪ್ರವೀಣ್ ಕಾಮತ್ ಹಾಗೂ ಟೂರ್ನಿಯ ಸಂಘಟಕರಾದ ವಿಜಯರಾಜ್ ಪೈ, ಅನೂಪ್ ಕಾಮತ್, ಶರತ್ ಕುಮಾರ್, ವಿನಯ್ ಕಾಮತ್ ಉಪಸ್ಥಿತರಿದ್ದರು. ಚೆಸ್ ತರಬೇತುದಾರ ಬಾಬು ಪೂಜಾರಿ ಉಪ್ಪುಂದ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ರಾಷ್ಟ್ರಮಟ್ಟದ ಚೆಸ್ ಟೂರ್ನಿಯಲ್ಲಿ 250 ಫಿಡೆ ರೇಟೆಡ್ ಆಟಗಾರರು ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 565 ಆಟಗಾರರು ವಿವಿಧ ವಯೋಮಾನದ ಹಾಗೂ ಮುಕ್ತ ವಿಭಾಗಗಳ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.