ಮಂಗಳೂರು : ರಾಜಧಾನಿ ಬೆಂಗಳೂರಿನ ನಂತರ ಮಂಗಳೂರಿನಲ್ಲೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕಳಪೆ ಆಹಾರ ಮಾರಾಟ ಮಾಡುವ ಹೋಟೆಲ್‌ಗಳ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ನಗರದ ಪ್ರಸಿದ್ಧ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಕೆಎಫ್‌ಸಿ (KFC) ಔಟ್‌ಲೆಟ್‌ನಿಂದ ಗ್ರಾಹಕರೊಬ್ಬರು ತರಿಸಿಕೊಂಡಿದ್ದ 'ಚಿಕನ್ ಪೆರಿ ಪೆರಿ'ಯಿಂದ ತೀವ್ರ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು.
ದೂರಿನ ಆಧಾರದ ಮೇಲೆ ಔಟ್‌ಲೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ ಅಧಿಕಾರಿಗಳಿಗೆ ಸ್ಟೋರೇಜ್ ರೂಂನಲ್ಲಿ 4 ರಿಂದ 8 ತಿಂಗಳಷ್ಟು ಹಳೆಯದಾದ ಕೊಳೆತ ಕೋಳಿ ಮಾಂಸ ಹಾಗೂ ಮೂರು ದಿನಗಳಿಂದ ಮರುಬಳಕೆ ಮಾಡಿ ಸಂಪೂರ್ಣ ಕಪ್ಪಾಗಿದ್ದ ಎಣ್ಣೆ ಪತ್ತೆಯಾಗಿದೆ. ಅತ್ಯಂತ ಕಳಪೆ ಹಾಗೂ ಆರೋಗ್ಯಕ್ಕೆ ಅಪಾಯಕಾರಿಯಾದ ಆಹಾರ ಮಾರಾಟ ಮಾಡುತ್ತಿದ್ದುದು ಖಾತ್ರಿಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣವೇ ಮಳಿಗೆಯನ್ನು ಬಂದ್ ಮಾಡಿಸಿದ್ದಾರೆ. ವಶಪಡಿಸಿಕೊಂಡ ಮಾಂಸ ಮತ್ತು ಎಣ್ಣೆಯ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಮೈಸೂರಿನ ಆಹಾರ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಸಂಸ್ಥೆಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.