image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಸಾರ್ವಜನಿಕರ ಸಹಯೋಗ ಅಗತ್ಯ: ಅರುಣ್ ಪ್ರಭಾ

ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಸಾರ್ವಜನಿಕರ ಸಹಯೋಗ ಅಗತ್ಯ: ಅರುಣ್ ಪ್ರಭಾ

ಮಂಗಳೂರು: ನಗರದ ಸಾರ್ವಂಗೀಣ ಹಾಗೂ ಅಚ್ಚುಕಟ್ಟಾದ ಅಭಿವೃದ್ಧಿಗಾಗಿ ಸಾರ್ವಜನಿಕರು ತಮ್ಮ ಸಲಹೆ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ನೀಡಬೇಕು ಎಂದು ಮಂಗಳೂರು ಸ್ಮಾರ್ಟ್ ಸಿಟಿಯ ತಾಂತ್ರಿಕ ವಿಭಾಗದ ಮುಖ್ಯ ವ್ಯವಸ್ಥಾಪಕ ಅರುಣ್ ಪ್ರಭಾ ಕೆ.ಎಸ್. ಕರೆ ನೀಡಿದ್ದಾರೆ. ಮೇರಿಹಿಲ್ ಬಳಿಯ ಗುರುನಗರದಲ್ಲಿ ಪ್ರಥ್ವಿ ಸೇವಾ ಟ್ರಸ್ಟ್ ಹಾಗೂ ವ್ಯಾಲಿವ್ಯೂವ್ ಲೇಔಟ್ ನಾಗರಿಕ ಸಮಿತಿಯ ಸಹಯೋಗದೊಂದಿಗೆ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಜನರು ತಮ್ಮ ಸ್ಥಳೀಯ ಸಮಸ್ಯೆಗಳು ಮತ್ತು ಬೇಕಾಗುವ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಆಡಳಿತಕ್ಕೆ ಬರೆದು ನೀಡಿದರೆ, ಅಗತ್ಯ ಹಣಕಾಸು ಒದಗಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸ್ಮಾರ್ಟ್ ಸಿಟಿ ಸಂಸ್ಥೆ ಸಿದ್ಧವಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸ್ವಾತಂತ್ರ್ಯದ ನೈಜ ಅನುಭವವನ್ನು ನೆರೆಹೊರೆಯವರ ಸ್ವತಂತ್ರ ಆಲೋಚನೆಗಳಿಗೆ ಗೌರವ ನೀಡುವ ಮೂಲಕ ಉಳಿಸಿಕೊಳ್ಳಬೇಕು. ಇತರರ ಮೇಲೆ ಬಂಧನಗಳನ್ನು ಹೇರದೆ 'ವಿವಿಧತೆಯಲ್ಲಿ ಏಕತೆ'ಯನ್ನು ಸಂಭ್ರಮಿಸಬೇಕು ಎಂದು ತಿಳಿಸಿದರು. ಮಾಜಿ ವಾಯುಸೇನಾಧಿಕಾರಿ ರಾಮಚಂದ್ರ ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಪ್ರಥ್ವಿ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಲೋಲಾಕ್ಷಿ ಫರ್ನಾಂಡಿಸ್ ಹಾಗೂ ವ್ಯಾಲಿವ್ಯೂವ್ ನಾಗರಿಕ ಸಮಿತಿಯ ಅಧ್ಯಕ್ಷ ಜೋ ಟೆಲಿಸ್ ಉಪಸ್ಥಿತರಿದ್ದು ವಂದನಾರ್ಪಣೆ ಸಲ್ಲಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪರಿಸರವಾದಿ ಪಿ. ಕೃಷ್ಣಪ್ಪ, ಸ್ಥಳೀಯ ನಾಗರಿಕರು ಹಾಗೂ ಹಲವು ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Category
ಕರಾವಳಿ ತರಂಗಿಣಿ