image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಿರಾಕರಣೆ: ಸಚಿವ ಜಮೀರ್ ವಿರುದ್ಧ ಸಂಸದ ಕ್ಯಾ. ಚೌಟ ಆಕ್ರೋಶ

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಿರಾಕರಣೆ: ಸಚಿವ ಜಮೀರ್ ವಿರುದ್ಧ ಸಂಸದ ಕ್ಯಾ. ಚೌಟ ಆಕ್ರೋಶ

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣ ಮಾಡಲು ನಿರಾಕರಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಡೆ ಸ್ವಾತಂತ್ರ್ಯ ಹೋರಾಟಗಾರರಿಗೆ, ದೇಶಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಮಾಡಿರುವ ಬಹುದೊಡ್ಡ ಅಪಮಾನ ಎಂದು ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಖೇದ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರೋತ್ಸವದಂದು ಧ್ವಜಾರೋಹಣದ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಸಮಯದ ಅಭಾವದ ನೆಪವೊಡ್ಡಿ ಮುಖ್ಯಮಂತ್ರಿಯವರಿಗೆ ಅಧಿಕೃತ ಪತ್ರ ಬರೆದಿರುವ ಸಚಿವರ ಮನಸ್ಥಿತಿಯನ್ನು ಸಂಸದರು ತೀವ್ರವಾಗಿ ಟೀಕಿಸಿದ್ದಾರೆ. ಈ ಹಿಂದೆ ಪ್ರಮಾಣ ವಚನ ಸ್ವೀಕಾರದ ವೇಳೆಯಲ್ಲೂ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸದೆ ಅಗೌರವ ತೋರಿದ್ದ ಸಚಿವ ಜಮೀರ್, ಈಗ ಧ್ವಜಾರೋಹಣ ನಿರಾಕರಿಸುವ ಮೂಲಕ ದೇಶದ ಸಂವಿಧಾನ ಹಾಗೂ ಭಾರತ ಮಾತೆಗೆ ಅವಮಾನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ರಿವರ್ಣ ಧ್ವಜವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಹಾಗೂ ಜನಪ್ರತಿನಿಧಿಯಾಗಿರುವ ಸಚಿವರ ಮೊದಲ ಕರ್ತವ್ಯವಾಗಿದೆ. ಸಚಿವರ ಈ ನಡೆಯನ್ನು ಖಂಡಿಸಿ ಕ್ರಮ ಕೈಗೊಳ್ಳಬೇಕಿದ್ದ ಮುಖ್ಯಮಂತ್ರಿಯವರೂ ಸಹ ತಕ್ಷಣವೇ ಅವರ ಕೋರಿಕೆಗೆ ಸಮ್ಮತಿಸಿ ವಿನಾಯಿತಿ ನೀಡಿರುವುದು ತೀವ್ರ ಅಚ್ಚರಿ ಮೂಡಿಸಿದೆ ಎಂದು ಚೌಟ ಹೇಳಿದ್ದಾರೆ. ಸಚಿವರ ಈ ಬೇಜವಾಬ್ದಾರಿತನ ಹಾಗೂ ಕಾಂಗ್ರೆಸ್ ನಾಯಕರ ಸಾಲು-ಸಾಲು ನಡವಳಿಕೆಗಳು ಪ್ರಸ್ತುತ ಸರ್ಕಾರವು ಮಹಿಳಾ ವಿರೋಧಿ, ಸಂವಿಧಾನ ವಿರೋಧಿ, ಕನ್ನಡ ವಿರೋಧಿ ಹಾಗೂ ರಾಷ್ಟ್ರ ವಿರೋಧಿಯಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಅವರು ಖಂಡಿಸಿದ್ದಾರೆ.

Category
ಕರಾವಳಿ ತರಂಗಿಣಿ