ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಗರದ ಬೋಳೂರಿನ ಸುಲ್ತಾನ್ ಬತ್ತೇರಿ ಬಳಿಯ ಸ್ವಸ್ತಿಕ್ ರಿವರ್ ಫ್ರಂಟ್‌ನಲ್ಲಿ "ಆಟಿದ ಐಸಿರ" ಕಾರ್ಯಕ್ರಮವು ಅತ್ಯಂತ ಸಡಗರದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಕಂಬಳದ ಕೋಣಗಳಿಗೆ ಹಿಂಡಿ ಅವಲಕ್ಕಿ ಸಮರ್ಪಿಸುವ ಮೂಲಕ ವಿಶೇಷ ರೀತಿಯಲ್ಲಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿದ್ದು, ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ತುಳುನಾಡಿನ ಹಲವು ವೀರರು ಭಾಗಿಯಾಗಿದ್ದರು ಹಾಗೂ ಈ ಮಣ್ಣಿನಲ್ಲೇ ವೀರತ್ವದ ಗುಣವಿದೆ ಎಂದರು. ಜಾನಪದ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ತುಳುನಾಡಿನಲ್ಲಿ ಜುಲೈ-ಆಗಸ್ಟ್ ತಿಂಗಳಲ್ಲಿ ಆಟಿ ಕಳಂಜದ್ದೇ ಸುದ್ದಿಯಾಗಿರುತ್ತದೆ.
ನಮ್ಮ ಹಿರಿಯರು ಯಾವುದೇ ಮೂಢನಂಬಿಕೆಗಳನ್ನು ಹುಟ್ಟುಹಾಕಿಲ್ಲ, ಪ್ರತಿಯೊಂದು ನಂಬಿಕೆಯ ಹಿಂದೆಯೂ ವೈಜ್ಞಾನಿಕ ಹಿನ್ನೆಲೆ ಇರುವುದೇ ಈ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ. ಹಿರಿಯರು ಆಟಿಯ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟು, ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸಿಕೊಂಡು ಹೇಗೆ ಬದುಕಿದರು ಎಂಬುದನ್ನು ಇಂದಿನ ಜನತೆ ಅರಿಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಜನಪದ ಕ್ರೀಡೆಗಳಾದ ಕೋಳಿ ಅಂಕ, ತೆಂಗಿನಕಾಯಿ ಕಟ್ಟುವುದು ಮುಂತಾದ ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಂಡಲದ ಮಹಿಳಾ ಮೋರ್ಚಾದವರು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ತುಳುನಾಡಿನ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿದರು. ಅಲ್ಲದೆ ಹುಲಿವೇಷ ನೃತ್ಯವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟಿತು. ಮಧ್ಯಾಹ್ನದ ವೇಳೆಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯ 127 ಬಗೆಯ ತಿನಿಸುಗಳು "ಆಟಿದ ಐಸಿರ"ದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಸಿದ್ಧಗೊಂಡಿದ್ದವು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಮಂಡಲದ ಪ್ರಭಾರಿ ತಿಲಕ್ ರಾಜ್ ಕೃಷ್ಣಾಪುರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ, ಮಂಡಲದ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಪ್ರಮುಖರಾದ ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರಾಜ್ ಗೋಪಾಲ್ ರೈ, ಗುರು ಚರಣ್, ನಾರಾಯಣ ಗಟ್ಟಿ, ನಿಕಟಪೂರ್ವ ಪಾಲಿಕೆ ಸದಸ್ಯರು ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.