ಉಜಿರೆ: ದೇಶದ ಸ್ವಾತಂತ್ರ್ಯದ ಜೊತೆಗೆ ಯುವಜನರು ಕೌಶಲ್ಯ ಹಾಗೂ ಉದ್ಯಮಶೀಲತೆಯ ಮೂಲಕ ಆರ್ಥಿಕ ಸ್ವಾತಂತ್ರ್ಯ ಸಾಧಿಸಿ ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಎಂದು ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯ ಕುಮಾರ್ ಹೇಳಿದರು. ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ, ಕೌಶಲ್ಯ ಹಾಗೂ ಸ್ವಉದ್ಯೋಗವನ್ನು ಬೆಳೆಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕ ಸುನಿಲ್ ಜಿ. ನಾಯ್ಕೆ ಸ್ವಾಗತಿಸಿ ಸ್ವಾತಂತ್ರ್ಯೋತ್ಸವದ ಮಹತ್ವ ತಿಳಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು, ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕರಾದ ಅನಸೂಯಾ, ಪ್ರಸಾದ್, ಪ್ರವೀಣ್, ಕಾಶ್ಮೀರ ಡಿ. ಸೋಜಾ, ಸುರೇಶ್ ಗೌಡ ಹಾಗೂ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರಾದ ಸಚಿನ್, ರಶ್ಮಿ ಮತ್ತು ಸೂರ್ಯಪ್ರಕಾಶ್ ಉಪಸ್ಥಿತರಿದ್ದರು. ಸಂಸ್ಥೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಕಂಪ್ಯೂಟರ್ ಟ್ಯಾಲಿ, ಮಹಿಳೆಯರ ವಸ್ತ್ರ ಚಿತ್ರಕಲೆ, ಫೋಟೋಗ್ರಫಿ ಹಾಗೂ ಮೊಬೈಲ್ ರಿಪೇರಿ ತರಬೇತಿ ವಿಭಾಗಗಳ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.