image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಜಿರೆ ರುಡ್‌ಸೆಟ್‌ನಲ್ಲಿ ಅಣಬೆ ಬೇಸಾಯ ತರಬೇತಿ ಸಮಾರೋಪ

ಉಜಿರೆ ರುಡ್‌ಸೆಟ್‌ನಲ್ಲಿ ಅಣಬೆ ಬೇಸಾಯ ತರಬೇತಿ ಸಮಾರೋಪ

ಉಜಿರೆ : ಉಜಿರೆಯ ಸಿದ್ಧವನದ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ಆಯೋಜಿಸಲಾಗಿದ್ದ ಅಣಬೆ ಬೇಸಾಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿಭಾಗದ ಉಪ ಕೃಷಿ ನಿರ್ದೇಶಕರಾದ ಶ್ರೀ ಶಿವಶಂಕರ ಹೆಚ್. ದಾನೆಗೊಂಡರೆ ಅವರು ಮಾತನಾಡುತ್ತಾ, ಅಣಬೆ ಬೇಸಾಯವು ಕಡಿಮೆ ಸ್ಥಳ, ಅಲ್ಪ ಬಂಡವಾಳ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ತಂದುಕೊಡುವ ಕೃಷಿ ಆಧಾರಿತ ಸ್ವಉದ್ಯೋಗವಾಗಿದೆ ಎಂದರು. ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಅಣಬೆ ಉತ್ಪಾದನೆಗೆ ಮುಂದಾಗುವಂತೆ ಕರೆ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಇಲಾಖೆಯಿಂದ ಸಿಗುವ ತಾಂತ್ರಿಕ ಮಾರ್ಗದರ್ಶನದ ಕುರಿತು ಮಾಹಿತಿ ಹಂಚಿಕೊಂಡರು.

ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಸುನಿಲ್ ಜಿ. ನಾಯ್ಕೆ ಅವರು ಅತಿಥಿಗಳನ್ನು ಸ್ವಾಗತಿಸಿ, ತರಬೇತಿ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಶ್ರೀ ಎಲಿಯಮ್ ಲಾನ್ಸಿ ರೆಬೆಲ್ಲೊ ಹಾಗೂ ಕುಮಾರಿ ನಿಶಾ ಅವರು ತಮ್ಮ ಅನುಭವ ಹಂಚಿಕೊಂಡು, ಈ ತರಬೇತಿಯಿಂದ ಅಣಬೆ ಬೇಸಾಯದ ಪ್ರಾಯೋಗಿಕ ಜ್ಞಾನ ಮತ್ತು ಸ್ವಂತ ಉದ್ಯಮ ಆರಂಭಿಸುವ ಆತ್ಮವಿಶ್ವಾಸ ಲಭಿಸಿದೆ ಎಂದು ತಿಳಿಸಿದರು. ಶ್ರೀ ಪುರಂದರ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ನಿರೂಪಿಸಿದರು. ಹಿರಿಯ ಉಪನ್ಯಾಸಕ ಶ್ರೀ ಕರುಣಾಕರ ಕೆ. ಜೈನ್ ವಂದಿಸಿದರು. ತರಬೇತಿ ಪಡೆದ ಶಿಬಿರಾರ್ಥಿಗಳು ಅಣಬೆ ಬೇಸಾಯವನ್ನು ಸ್ವಉದ್ಯೋಗವಾಗಿ ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Category
ಕರಾವಳಿ ತರಂಗಿಣಿ