image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯಲ್ಲಿ (FMCI) 2026ರ ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರದ್ಧೆ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ರೋಗಿಗಳು ಹಾಗೂ ಅವರ ಬಂಧುಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನರ್ಸಿಂಗ್ ಕಾಲೇಜಿನ ವೈದ್ಯಕೀಯ ಮತ್ತು ಸರ್ಜಿಕಲ್ ವಿಭಾಗದ ಮುಖ್ಯಸ್ಥ ಪ್ರೊ. ಅಶ್ವಿನ್ ಬ್ರೋಮಿಯೋ ಸ್ವಾಗತಿಸಿ, ಮುಖ್ಯ ಅತಿಥಿ ಡಾ. ಅನಿಲ್ ಶೆಟ್ಟಿ ಅವರನ್ನು ಪರಿಚಯಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥರಾಗಿರುವ ಡಾ. ಅನಿಲ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಭದ್ರತಾ ಸಿಬ್ಬಂದಿಯ ಶಿಸ್ತಿನ ಪಥಸಂಚಲನ ಹಾಗೂ ರಾಷ್ಟ್ರಗೀತೆ ಗಾಯನ ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿತು.

ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಡಾ. ಅನಿಲ್ ಶೆಟ್ಟಿ, ಪಂಡಿತ್ ಜವಾಹರ್‌ಲಾಲ್ ನೆಹರೂ ಅವರ ಐತಿಹಾಸಿಕ 'ನಿಯತಿಯೊಂದಿಗಿನ ಒಡಂಬಡಿಕೆ' (ಟ್ರಿಸ್ಟ್ ವಿತ್ ಡೆಸ್ಟಿನಿ) ಭಾಷಣವನ್ನು ಸ್ಮರಿಸಿದರು. ಕಳೆದ ಎಂಟು ದಶಕಗಳಲ್ಲಿ ಭಾರತವು ತಂತ್ರಜ್ಞಾನ, ಆರ್ಥಿಕತೆ, ಬಾಹ್ಯಾಕಾಶ ಹಾಗೂ ಡಿಜಿಟಲ್ ಪಾವತಿ ರಂಗದಲ್ಲಿ ಜಾಗತಿಕ ಸಾಧನೆ ಮಾಡಿದೆ. ಆದರೆ ಅಪೌಷ್ಟಿಕತೆ, ಆರೋಗ್ಯ ಮೂಲಸೌಕರ್ಯದ ಕೊರತೆ ಹಾಗೂ ಭ್ರಷ್ಟಾಚಾರದಂತಹ ಸವಾಲುಗಳು ಇಂದಿಗೂ ಇವೆ ಎಂದು ಅವರು ಬೆಟ್ಟು ಮಾಡಿದರು. ಸ್ವಾತಂತ್ರ್ಯವೆಂದರೆ ಕೇವಲ ವಿದೇಶಿ ಆಳ್ವಿಕೆಯಿಂದ ಮುಕ್ತಿಯಷ್ಟೇ ಅಲ್ಲ; ಗೌರವ, ನ್ಯಾಯ ಹಾಗೂ ಕರುಣೆಯ ಸಮಾಜವನ್ನು ಕಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಇದೇ ವೇಳೆ ಫಾದರ್ ಮುಲ್ಲರ್ ಸಂಸ್ಥೆಯನ್ನು ದೇಶದ ವಿವಿಧ ಭಾಗಗಳ ಜನರನ್ನು ಒಗ್ಗೂಡಿಸುವ 'ಕಿರು ಭಾರತ' ಎಂದು ಬಣ್ಣಿಸಿದರು.

ಫಿಜಿಯೋಥೆರಪಿ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಪ್ರಸ್ತುತಗೊಂಡಿತು. ಆಸ್ಪತ್ರೆಯ ಆಡಳಿತಾಧಿಕಾರಿ ರೇವ್. ಫಾ. ಜಾರ್ಜ್ ಜೀವನ್ ಸಿಕ್ವೇರಾ ಅವರು ಮುಖ್ಯ ಅತಿಥಿ ಡಾ. ಅನಿಲ್ ಶೆಟ್ಟಿ ಅವರನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿದರು. ಸ್ಪೀಚ್ ಅಂಡ್ ಹಿಯರಿಂಗ್ ಕಾಲೇಜಿನ ಮೆಲಿಸ್ಸಾ ಸಲ್ಡಾನ್ಹಾ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ನಿರ್ದೇಶಕ ರೇವ್. ಫಾ. ಫಾಸ್ಟಿನ್ ಲೂಕಾಸ್ ಲೋಬೋ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ರೇವ್. ಡಾ. ಮೈಕಲ್ ಸಂತುಮಾಯೋರ್, ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್, ಸುಷ್ಮಾ ಹಾಗೂ ನರ್ಸಿಂಗ್ ಸೇವಾ ವಿಭಾಗದ ಮುಖ್ಯಸ್ಥೆ ಸಿಸ್ಟರ್ ನ್ಯಾನ್ಸಿ ಮಥಾಯಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.

Category
ಕರಾವಳಿ ತರಂಗಿಣಿ