ಸುರತ್ಕಲ್ : ಸುರತ್ಕಲ್‌ನ ಕುತ್ಲೇತ್ತೂರಿನಲ್ಲಿ ನಡೆದ ಎಂಆರ್‌ಪಿಎಲ್ 4ನೇ ಹಂತದ ಭೂ ನಿರ್ವಸಿತರ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಮುಂದಿನ ಮೂರು ತಿಂಗಳೊಳಗೆ ಉದ್ಯೋಗ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡದಿದ್ದರೆ ವಿಸ್ತರಣೆ ಕಾಮಗಾರಿ ತಡೆದು ಭೂಮಿಯನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಕಳೆದ 11 ವರ್ಷಗಳಿಂದ ಉದ್ಯೋಗಕ್ಕಾಗಿ ನೂರಾರು ಅಭ್ಯರ್ಥಿಗಳು ಕಾಯುತ್ತಿದ್ದು, ಪಂಚಾಯತ್ ತೆರಿಗೆ ದಾಖಲೆ ಪರಿಗಣಿಸಿ ಉದ್ಯೋಗ ನೀಡಲು 2024ರ ಜುಲೈನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ನಿರ್ಧರಿಸಲಾಗಿತ್ತು. ಆದರೆ ಕಂಪನಿ ಹಾಗೂ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಗಡುವನ್ನು ಕೈಬಿಟ್ಟು ಅನ್ಯಾಯ ಮಾಡಿದ್ದಾರೆ ಎಂದು ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಹಾಗೂ ಗೌರವಾಧ್ಯಕ್ಷ ಡೋನಿ ಸುವಾರಿಸ್ ಆರೋಪಿಸಿದ್ದಾರೆ.
2024ರ ಜುಲೈ 12ರಂದು ನಡೆದ ಸಭೆಯ ಮೂಲ ನಡವಳಿಯನ್ನು ಸಮಿತಿ, ಶಾಸಕರು ಹಾಗೂ ಸಂಸದರ ಗಮನಕ್ಕೆ ತರದೆ ಕಂಪನಿಯ ಹಿತಾಸಕ್ತಿಗೆ ತಕ್ಕಂತೆ ತಿದ್ದುಪಡಿ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಕೆ. ರಾಜು ಅವರೇ ಈ ಅನ್ಯಾಯಕ್ಕೆ ಕಾರಣರಾಗಿದ್ದು, ನಡವಳಿಗಳ ಫೋರ್ಜರಿ ಬಗ್ಗೆ ಮಂಗಳೂರು ಸಂಸದ ಬ್ರಿಜೇಶ್ ಚೌಟ ಅವರ ಗಮನಕ್ಕೆ ತಂದರೂ ಅವರು ಧ್ವನಿ ಎತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಸೂಕ್ತ ತನಿಖೆ ನಡೆಸಿ ನೈಜ ನಡವಳಿಯನ್ನೇ ಸರ್ಕಾರಿ ಆದೇಶವನ್ನಾಗಿ ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ.
ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ, ಭೂಮಿ ಕಳೆದುಕೊಂಡ ಎಲ್ಲಾ 436 ಮನೆಗಳ ನಿರ್ವಸಿತರಿಗೂ ತಕ್ಷಣವೇ ಖಾಯಂ ಉದ್ಯೋಗ ನೀಡಬೇಕು, ಇಲ್ಲದಿದ್ದರೆ ವಿಳಂಬಕ್ಕೆ ಮಾಸಿಕ ₹40,000 ಭತ್ಯೆ ನೀಡಬೇಕು. ಅಲ್ಲದೆ 10 ವರ್ಷಗಳ ಹಿಂದೆ ಪ್ರತಿ ಸೆಂಟ್ಸ್‌ಗೆ ₹80,000 ದರ ನೀಡಲಾಗಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಪ್ರತಿ ಸೆಂಟ್ಸ್‌ಗೆ ಕನಿಷ್ಠ ₹3 ಲಕ್ಷ ಪರಿಹಾರ ಒದಗಿಸಬೇಕು. ಮೂರು ತಿಂಗಳೊಳಗೆ ಈ ಬೇಡಿಕೆ ಈಡೇರಿಸದಿದ್ದಲ್ಲಿ ಭೂಮಿಯನ್ನು ಹಿಂತಿರುಗಿ ಪಡೆಯುವುದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ರೈತ ಸಂಘಟನೆಗಳೊಂದಿಗೆ ಸೇರಿ ಎಂಆರ್‌ಪಿಎಲ್ ಮುಂಭಾಗ ಬೃಹತ್ ಚಳುವಳಿ ನಡೆಸಲಾಗುವುದು ಎಂದು ನಿರ್ವಸಿತರು ಎಚ್ಚರಿಕೆ ನೀಡಿದ್ದಾರೆ.