ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ 'ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್'ಗೆ ತುಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಕೋಟಾದಡಿ ಅಧಿಕೃತ ಅನುಮೋದನೆ ದೊರೆತಿದೆ. 2026–27ನೇ ಶೈಕ್ಷಣಿಕ ವರ್ಷಕ್ಕೆ ಮಂಜೂರಾಗಿರುವ ಒಟ್ಟು 150 ಎಮ್ಬಿಬಿಎಸ್ ಸೀಟುಗಳ ಪೈಕಿ, 54 ಸೀಟುಗಳು ತುಳು ಭಾಷಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ. ಈ ಬೆಳವಣಿಗೆಯು ಕರಾವಳಿ ಕರ್ನಾಟಕದ ತುಳು ಭಾಷಿಕ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ ತಮ್ಮದೇ ನೆಲದಲ್ಲಿ ಉನ್ನತ ಶಿಕ್ಷಣ ಪಡೆಯಲು ಉತ್ತಮ ಅವಕಾಶ ಕಲ್ಪಿಸಿದೆ. ಸಂಸ್ಥೆಯು ಗುಣಮಟ್ಟದ ವೈದ್ಯಕೀಯ ಶಿಕ್ಷಣದೊಂದಿಗೆ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ತರಬೇತಿಗೆ ಅತ್ಯಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿದೆ.
ಆಳ್ವಾಸ್ ವೈದ್ಯಕೀಯ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ 650 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯು ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಪ್ರಾಯೋಗಿಕ ಅನುಭವ ಪಡೆಯಲು ನೆರವಾಗಲಿದೆ. ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯ (ಹಾಸ್ಟೆಲ್) ಸೌಲಭ್ಯ ಕಲ್ಪಿಸಲಾಗಿದೆ. ಅರ್ಹ ತುಳು ಭಾಷಿಕ ಅಭ್ಯರ್ಥಿಗಳು ಪ್ರವೇಶ ಪ್ರಕ್ರಿಯೆ ಮತ್ತು ಅರ್ಹತೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ, ನಿಗದಿತ ನಿಯಮಾನುಸಾರ ಅರ್ಜಿ ಸಲ್ಲಿಸಿ ಈ ಅವಕಾಶದ ಪ್ರಯೋಜನ ಪಡೆಯಬಹುದಾಗಿದೆ.