ಮಂಗಳೂರು: ತುಳುನಾಡಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ನಾಗರ ಪಂಚಮಿ ಹಬ್ಬದ ದಿನದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಿಸುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ನಾಗರಾಧನೆಗೆ ಅತ್ಯಂತ ಪ್ರಮುಖ ಸ್ಥಾನವಿದ್ದು, ಪ್ರತಿಯೊಂದು ಕುಟುಂಬಕ್ಕೂ ನಾಗನ ಮೂಲಸ್ಥಾನವಿರುತ್ತದೆ. ವರ್ಷಕ್ಕೊಮ್ಮೆ ಕುಟುಂಬ ಸಮೇತರಾಗಿ ಮೂಲಸ್ಥಾನಕ್ಕೆ ತೆರಳಿ ನಾಗನಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಪಾರಂಪರಿಕ ಸಂಪ್ರದಾಯವಾಗಿದೆ. ಹಿಂದೂಗಳಷ್ಟೇ ಅಲ್ಲದೆ ಜೈನರು ಕೂಡ ಆಚರಿಸುವ ಈ ಸಾಂಪ್ರದಾಯಿಕ ಹಬ್ಬದ ಸಂದರ್ಭದಲ್ಲಿ ರಜೆ ನೀಡದಿದ್ದರೆ ಕುಟುಂಬಗಳ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ. ಧಾರ್ಮಿಕ ಭಾವನೆಗಳು ಹಾಗೂ ಜನರ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಉಭಯ ಜಿಲ್ಲೆಗಳಲ್ಲಿ ರಜೆ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.