ಉಜಿರೆ: ವಿದ್ಯೆ ಮತ್ತು ಮಾನವೀಯ ಮೌಲ್ಯಗಳಿಂದ ಸುಸಂಸ್ಕೃತ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ನಾವೂರ ಆರೋಗ್ಯ ಕ್ಲಿನಿಕ್ನ ಡಾ. ಪ್ರದೀಪ್ ಆಟಿಕುಕ್ಕೆ ಹೇಳಿದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳ ಸನ್ಮಾನ, ವಿದ್ಯಾರ್ಥಿವೇತನ ವಿತರಣೆ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ತಂದು ಸಮಾಜಕ್ಕೆ ಸಭ್ಯ ನಾಗರಿಕರನ್ನು ರೂಪಿಸಿವೆ ಹಾಗೂ ಪಠ್ಯೇತರ ಚಟುವಟಿಕೆಗಳು ಜೀವನ ಶಿಕ್ಷಣವನ್ನು ನೀಡುತ್ತವೆ ಎಂದರು.
ಸಮಾರಂಭದಲ್ಲಿ ಶುಭಾಶಂಸನೆ ಗೈದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಅವರು, ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ರಾಯಭಾರಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಮತ್ತು ಸಾಧನೆ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಊರುಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಡಾ. ಪ್ರಕಾಶ್ (ಉಜಿರೆ), ಡಾ. ರಾಜಾರಾಮ (ಉಪ್ಪಿನಂಗಡಿ), ಡಾ. ಎಂ.ಎಂ. ದಯಾಕರ, ಡಾ. ಸದಾನಂದ ಪೂಜಾರಿ (ಮಂಗಳೂರು), ಡಾ. ಶ್ರೀಹರಿ (ಗುರುವಾಯನಕೆರೆ), ಡಾ. ಪ್ರದೀಪ್ ಆಟಿಕುಕ್ಕೆ (ನಾವೂರು), ಡಾ. ಶಶಿಕಾಂತ್ ಡೋಂಗ್ರೆ (ಬೆಳ್ತಂಗಡಿ), ಡಾ. ರಂಜನ್ ಕುಮಾರ್ (ಉಜಿರೆ), ಡಾ. ರೇಷ್ಮಾ (ಮೂಡಬಿದ್ರೆ) ಹಾಗೂ ಡಾ. ಶ್ರೀಹರ್ಷ (ಉಜಿರೆ) ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ವತಿಯಿಂದ ಕಾಲೇಜಿನ 20 ವಿದ್ಯಾರ್ಥಿಗಳಿಗೆ ತಲಾ 5,000 ರೂ. ನಂತೆ ಒಟ್ಟು 1 ಲಕ್ಷ ರೂ. ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಜೊತೆಗೆ ಕಾಲೇಜಿನ ಮಧ್ಯಾಹ್ನ ಭೋಜನ ವ್ಯವಸ್ಥೆಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ದೇಣಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಎಸ್ಪಿ ಪೀತಾಂಬರ ಹೇರಾಜೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಸ್ವಾಗತಿಸಿದರು, ವಕೀಲ ಬಿ.ಕೆ. ಧನಂಜಯ ರಾವ್ ಧನ್ಯವಾದ ಸಲ್ಲಿಸಿದರು. ಉಪನ್ಯಾಸಕರಾದ ದಿವಾ ಕೊಕ್ಕಡ ಹಾಗೂ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.