image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನುಷ್ಯತ್ವದ ಉಳಿವಿಗೆ ಸಾಹಿತ್ಯದ ಉಳಿವು ಅಗತ್ಯ: ಡಾ. ಮಾನಸಾ ಕೀಳಂಬಿ

ಮನುಷ್ಯತ್ವದ ಉಳಿವಿಗೆ ಸಾಹಿತ್ಯದ ಉಳಿವು ಅಗತ್ಯ: ಡಾ. ಮಾನಸಾ ಕೀಳಂಬಿ

ಮೂಡುಬಿದಿರೆ: ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವ ಶಕ್ತಿ ಸಾಹಿತ್ಯಕ್ಕಿದ್ದು, ಸಾಹಿತ್ಯದ ಉಳಿವು ಎಂದರೆ ಮನುಷ್ಯತ್ವದ ಉಳಿವು ಎಂದು ಖ್ಯಾತ ಸಾಹಿತಿ ಹಾಗೂ ಬೋಧಕಿ ಡಾ. ಮಾನಸಾ ಕೀಳಂಬಿ ತಿಳಿಸಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಾಹಿತ್ಯ: ‘ಇ’ ಹೊತ್ತಗೆ – ಈ ಹೊತ್ತಿಗೆ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು. ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಹಿತ್ಯವೂ ಇಂದು ಡಿಜಿಟಲ್ ಸ್ವರೂಪ ಪಡೆದುಕೊಂಡಿದ್ದು, ಇ-ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹೆಚ್ಚಿನ ಓದುಗರನ್ನು ತಲುಪುತ್ತಿದೆ. ವಿಶ್ವದ ಪ್ರಮುಖ ಗ್ರಂಥಾಲಯಗಳಲ್ಲಿರುವ ಅಪರೂಪದ ಕೃತಿಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಸುಲಭವಾಗಿ ಓದಲು ಸಾಧ್ಯವಾಗುತ್ತಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ರೀತಿಯಲ್ಲಿ ಸಾಹಿತ್ಯ ಸೃಷ್ಟಿಸುವ ಅವಕಾಶ ದೊರೆತಿದೆ ಎಂದರು.

ಸಾಹಿತ್ಯವು ಕೇವಲ ಸಾಂಪ್ರದಾಯಿಕ ವಿಷಯಗಳಿಗೆ ಸೀಮಿತವಾಗದೆ ಆರ್ಥಿಕತೆ, ಮಕ್ಕಳ ಮಾನಸಿಕ ಆರೋಗ್ಯ, ಲಿಂಗಾಧಾರಿತ ವಿಚಾರಗಳು ಹಾಗೂ ಸಮಕಾಲೀನ ಸಾಮಾಜಿಕ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾತ್ರ ಮಾನವ ಬದುಕು ಸಂಪೂರ್ಣವಾಗುವುದಿಲ್ಲ. ಮನಸ್ಸಿನ ವಿಕಾರಗಳನ್ನು ಕಡಿಮೆ ಮಾಡಿ ಮಾನವೀಯತೆಯನ್ನು ಬೆಳೆಸುವ ಶಕ್ತಿ ಸಾಹಿತ್ಯಕ್ಕಿದ್ದು, ಓದಿನಿಂದ ಸ್ಪಷ್ಟ ಮಾತು, ಸಾಂಸ್ಕೃತಿಕ ಮೌಲ್ಯ ಮತ್ತು ಉತ್ತಮ ಚಿಂತನೆಗಳು ವೃದ್ಧಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಮಾತನಾಡಿ, ಕಾಲಕ್ಕೆ ತಕ್ಕಂತೆ ಪುಸ್ತಕದ ಸ್ವರೂಪ ಹಾಗೂ ಓದುವ ವಿಧಾನಗಳು ಬದಲಾಗಬಹುದು; ಆದರೆ ಸಾಹಿತ್ಯದ ಮೂಲ ಆಶಯ ಮತ್ತು ಅದರ ಸತ್ವ ಎಂದಿಗೂ ಬದಲಾಗಬಾರದು ಎಂದರು. ವೇಗದ ಜೀವನಶೈಲಿಯಲ್ಲಿ ವಿದ್ಯಾರ್ಥಿಗಳು ತಾಳ್ಮೆ, ಶಿಸ್ತು ಮತ್ತು ನಿಯಂತ್ರಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಉಪನ್ಯಾಸಕ ರಾಮಕೃಷ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಡಿ.ವಿ. ಪ್ರಕಾಶ್ ಅತಿಥಿಗಳನ್ನು ಪರಿಚಯಿಸಿದರು. ಇಂಗ್ಲಿಷ್ ವಿಭಾಗದ ವೇದಾವತಿ ಕಾರ್ಯಕ್ರಮ ನಿರೂಪಿಸಿದರೆ, ಕನ್ನಡ ವಿಭಾಗದ ಮಹೇಶ್ ವಂದಿಸಿದರು. ಉಪಪ್ರಾಂಶುಪಾಲೆ ಜಾನ್ಸಿ ಪಿ. ಎನ್. ಹಾಗೂ ಕಲಾ ವಿಭಾಗದ ಮುಖ್ಯಸ್ಥ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ