ಮಂಗಳೂರು : ಮಂಗಳೂರಿನ ಎವಿ ರಾವ್ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಂಗಳೂರು ಶಾಖೆ ಆಯೋಜಿಸಿದ್ದ "ಆಟಿಡೊಂಜಿ ದಿನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ತುಳುನಾಡಿನ ಸಾಂಪ್ರದಾಯಿಕ ಆಟಿ ಆಚರಣೆಗೆ ವೈಜ್ಞಾನಿಕ ಹಾಗೂ ವೈದ್ಯಕೀಯ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು. ಕರಾವಳಿಯ ಪೂರ್ವಜರು ಪ್ರಕೃತಿ ಮತ್ತು ಹವಾಮಾನ ಬದಲಾವಣೆಗೆ ಅನುಗುಣವಾಗಿ ಆರೋಗ್ಯ ರಕ್ಷಣೆಯ ದೃಷ್ಟಿಕೋನದಿಂದ ಈ ಆಚರಣೆಯನ್ನು ರೂಪಿಸಿದ್ದು, ಈ ಪರಂಪರೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತುಳು ಭಾಷಾ ವಿದ್ವಾಂಸ ಕೆ.ಕೆ. ಪೇಜಾವರ ಮಾತನಾಡಿ, ಆಟಿ ತಿಂಗಳಿನಲ್ಲಿ ಸೇವಿಸುವ ನೈಸರ್ಗಿಕ ಖಾದ್ಯಗಳು, ಕಷಾಯ ಮತ್ತು ಪಾನೀಯಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧೀಯ ಗುಣಗಳನ್ನು ಹೊಂದಿವೆ ಎಂದು ವಿವರಿಸಿದರು. ಕನ್ನಡ ಭಾಷಾ ವಿದ್ವಾನ್ ದಾಮೋದರ್ ಶರ್ಮ ಮಾತನಾಡಿ, ಆಟಿ ಮಾಸದಲ್ಲಿ ನಡೆಸಲಾಗುತ್ತಿದ್ದ ಪ್ರಕೃತಿ, ದೈವ ಮತ್ತು ನಾಗದೇವತಾರಾಧನೆಗಳು ಕುಟುಂಬದಲ್ಲಿ ಒಗ್ಗಟ್ಟು, ಬಾಂಧವ್ಯ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ವೃದ್ಧಿಸುತ್ತಿದ್ದವು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಎಂಎ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ನೂತನ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ ಹಾಗೂ ಕೋಶಾಧಿಕಾರಿ ಡಾ. ಜ್ಯುಲಿಯನ್ ಸಲ್ದಾನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷತಾ ಮತ್ತು ಯತೀಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಮನರಂಜನಾ ಕಾರ್ಯಕ್ರಮದ ಅಂಗವಾಗಿ 'ಸು ಫ್ರಮ್ ಸೋ' ಕನ್ನಡ ಚಲನಚಿತ್ರ ತಂಡದ ಕಲಾವಿದರಾದ ಜೆಪಿ ತುಮಿನಾಡ್, ಪುಷ್ಪರಾಜ್ ಬಲ್ಲಾಳ್ ಮತ್ತು ಶನಿಲ್ ಗೌತಮ್ ಸಭಿಕರೊಂದಿಗೆ ಸಂವಾದ ನಡೆಸಿದರು.