ಮಂಗಳೂರು: ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರು ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ದೂರದರ್ಶನ ಏರ್ಪಡಿಸಿದ್ದ ಉನ್ನತ ಶ್ರೇಯಾಂಕದ ಭರತನಾಟ್ಯ ಪರೀಕ್ಷೆಯಲ್ಲಿ 'ಬಿ-ಹೈ' ಸ್ಥಾನ ಪಡೆದುಕೊಂಡಿದ್ದಾರೆ. ಈ ಪ್ರತಿಷ್ಠಿತ ಶ್ರೇಯಾಂಕವು ಅವರಿಗೆ ಭಾರತದಾದ್ಯಂತ ಉನ್ನತ ಮಟ್ಟದ ವೇದಿಕೆಗಳಲ್ಲಿ ಪ್ರದರ್ಶನ ನೀಡಲು ಅರ್ಹತೆ ತಂದುಕೊಟ್ಟಿದೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಾ ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಿರುವ ವಿದುಷಿ ಅಯನಾ, ಮಂಗಳೂರಿನ ನೃತ್ಯವಿದುಷಿಯರಾದ ಶಾರದಾಮಣಿ ಶೇಖರ್ ಹಾಗೂ ಶ್ರೀಲತಾ ನಾಗರಾಜ್ ಅವರ ಶಿಷ್ಯೆಯಾಗಿದ್ದಾರೆ. ಪ್ರಸ್ತುತ ಇವರು ಚೆನ್ನೈನ ವರ್ಷಾ ಅಕ್ಹೌರಿ ಅವರ ಬಳಿ ಭರತನಾಟ್ಯದ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಇವರು ನಾಡಿನ ಪ್ರಸಿದ್ಧ ಕವಿ ಹಾಗೂ ಸಾಹಿತಿ ದಂಪತಿಗಳಾದ ಡಾ. ವಸಂತಕುಮಾರ ಪೆರ್ಲ ಮತ್ತು ಕೆ. ಶೈಲಾಕುಮಾರಿ ಅವರ ದ್ವಿತೀಯ ಪುತ್ರಿಯಾಗಿದ್ದಾರೆ. ಎಂಜಿನಿಯರಿಂಗ್ ಶಿಕ್ಷಣ ಪೂರೈಸಿ ಪ್ರಸ್ತುತ ಚೀನಾದಲ್ಲಿ ಉದ್ಯೋಗದಲ್ಲಿರುವ ಇವರು, ನೃತ್ಯದೊಂದಿಗೆ ಯೋಗ ಕ್ಷೇತ್ರದಲ್ಲೂ ಪರಿಣಿತಿ ಹೊಂದಿದ್ದಾರೆ.