image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಡ್ಯಾರಿನಲ್ಲಿ ವನಮಹೋತ್ಸವ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಶಿಬಿರ ಯಶಸ್ವಿ

ಅಡ್ಯಾರಿನಲ್ಲಿ ವನಮಹೋತ್ಸವ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಶಿಬಿರ ಯಶಸ್ವಿ

ಮಂಗಳೂರು: ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಅಡ್ಯಾರು ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಅಡ್ಯಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ವನಮಹೋತ್ಸವ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಶಿಬಿರ ಜರುಗಿತು. ಕೆಪಿಸಿಸಿ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ವನಮಹೋತ್ಸವ ತಮಗೆ ಅತ್ಯಂತ ಪ್ರೀತಿಯ ವಿಷಯವಾಗಿದ್ದು, ಗಿಡಗಳನ್ನು ನೆಡುವುದು ಅತ್ಯಂತ ಸಂತಸದ ಸಂಗತಿ ಎಂದರು. ತಮ್ಮ ತೋಟದಲ್ಲಿ ಈಗಾಗಲೇ ವಿವಿಧ ಜಾತಿಯ ಸುಮಾರು 2,000 ಗಿಡಗಳನ್ನು ನೆಟ್ಟಿರುವುದಾಗಿ ಅವರು ಹರ್ಷ ವ್ಯಕ್ತಪಡಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿವೆ ಎಂದು ಬಣ್ಣಿಸಿದ ಅವರು, ಸರ್ಕಾರದ ಹಣ ಕೇವಲ ಉಳ್ಳವರ ಪಾಲಾಗದೆ ಬಡವರಿಗೂ ತಲುಪಬೇಕು ಎಂಬ ಸದಾಶಯದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ಯಾವುದೇ ಲಂಚದ ವ್ಯವಹಾರಕ್ಕೆ ಅವಕಾಶವಿಲ್ಲದೆ, ಅನುದಾನವು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಪಾರದರ್ಶಕ ವ್ಯವಸ್ಥೆ ಈ ಯೋಜನೆಗಳ ವಿಶೇಷತೆಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಭಾರತ್ ಜೋಡೋ ಯುವ ಸಂಘಟನೆಗಳ ರಚನೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಯೊಂದು ಸಂಘಟನೆಗೆ ಹತ್ತು ಲಕ್ಷ ರೂಪಾಯಿ ಅನುದಾನವನ್ನು ಸರ್ಕಾರ ವ್ಯಯಿಸಲಿದೆ ಎಂದು ತಿಳಿಸಿದ ಅವರು, ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಆಡಳಿತಾಧಿಕಾರಿ ಶಿವಣ್ಣ, ಮೆಸ್ಕಾಂ ಇಲಾಖೆಯ ಎಇಇ ಸತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಫ್ ಹಾಗೂ ಮಂಗಳೂರು ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ರಫೀಕ್, ನವಾಜ್, ನೀತು, ಜಯಂತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು. ರಾಜ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ