image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ 'ವಿಶ್ವ ಸ್ತನ್ಯಪಾನ ಸಪ್ತಾಹ' ಆಚರಣೆ

ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ 'ವಿಶ್ವ ಸ್ತನ್ಯಪಾನ ಸಪ್ತಾಹ' ಆಚರಣೆ

ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ನರ್ಸಿಂಗ್ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಆಶ್ರಯದಲ್ಲಿ ‘ವಿಶ್ವ ಸ್ತನ್ಯಪಾನ ಸಪ್ತಾಹ’ದ ಅಂಗವಾಗಿ ಏಳು ದಿನಗಳ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ಸಪ್ತಾಹದ ಮೊದಲ ದಿನ ಆಳ್ವಾಸ್‌ನ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಶ್ರೇಯಾ ವೈದ್ಯ ಜೂಮ್ ಮೀಟಿಂಗ್ ಮೂಲಕ ಸುಮಾರು 120 ತಾಯಂದಿರಿಗೆ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಎರಡನೇ ದಿನ ನರ್ಸಿಂಗ್ ವಿದ್ಯಾರ್ಥಿಗಳು ತಯಾರಿಸಿದ ಜಾಗೃತಿ ವೀಡಿಯೊಗಳ ಪ್ರದರ್ಶನ ಹಾಗೂ ಮೂರನೇ ದಿನ ಗರ್ಭಿಣಿಯರ ಆಹಾರ ಪದ್ಧತಿಯನ್ನು ವಿವರಿಸುವ ಸ್ಟಾಲ್‌ಗಳ ಪ್ರದರ್ಶನ ನಡೆಯಿತು.

ನಾಲ್ಕನೇ ದಿನ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಾಗಾರ ಹಾಗೂ ಐದನೇ ದಿನ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಅಧಿಕಾರಿ ಎಂ.ಎಸ್. ಶ್ರೀಧರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕಾರಗಿ ಹಾಗೂ ಮಕ್ಕಳ ತಜ್ಞ ಡಾ. ದೀಪಕ್ ಪ್ರೀತೇಶ್ ಉಪಸ್ಥಿತರಿದ್ದರು. ಆರನೇ ದಿನ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಸಪ್ತಾಹದ ಕೊನೆಯ ದಿನ ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಗರ್ಭಿಣಿಯರ ಮಾನಸಿಕ ಆರೋಗ್ಯ ಕುರಿತು ಡಾ. ಪ್ರಜಕ್ತ ವಿ. ರಾವ್, ಗರ್ಭಿಣಿಯರ ಆಹಾರ ಪದ್ಧತಿ ಕುರಿತು ರಾಷ್ಟ್ರಪತಿ ಪ್ರಶಸ್ತಿ ವಿಜೇತೆ ಅನುಷಾ ಆಚಾರ್, ‘ಮಡಿಲು ಹೆರಿಗೆ ಯೋಜನೆ’ ಕುರಿತು ಡಾ. ಹನಾ ಶೆಟ್ಟಿ ಹಾಗೂ ಸ್ತನ್ಯಪಾನದ ಬಗ್ಗೆ ಪ್ರೊ. ಕವಿತಾ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ 2026ನೇ ಸಾಲಿನ ತಳಮಟ್ಟದ ನವೋದ್ಯಮ ಗೌರವಕ್ಕೆ ಪಾತ್ರರಾಗಿರುವ ಮೂಡುಬಿದಿರೆಯ ಅನುಷಾ ಪ್ರಜ್ವಲ್ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Category
ಕರಾವಳಿ ತರಂಗಿಣಿ