image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಈಶ ಗ್ರಾಮೋತ್ಸವ 2026: ಮೂಡುಬಿದಿರೆಯಲ್ಲಿ ಕರ್ನಾಟಕ ವಿಭಾಗೀಯ ಪಂದ್ಯಗಳ ಯಶಸ್ವಿ ಸಮಾಪಣೆ

ಈಶ ಗ್ರಾಮೋತ್ಸವ 2026: ಮೂಡುಬಿದಿರೆಯಲ್ಲಿ ಕರ್ನಾಟಕ ವಿಭಾಗೀಯ ಪಂದ್ಯಗಳ ಯಶಸ್ವಿ ಸಮಾಪಣೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ 18ನೇ ಆವೃತ್ತಿಯ 'ಈಶ ಗ್ರಾಮೋತ್ಸವ 2026'ರ ಕರ್ನಾಟಕ ವಿಭಾಗೀಯ ಪಂದ್ಯಗಳು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡವು. ಈಶ ಔಟ್‌ರೀಚ್ ಆಯೋಜಿಸಿದ್ದ ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈ ವಿಭಾಗೀಯ ಪಂದ್ಯಗಳಲ್ಲಿ ಒಟ್ಟು 18 ಪುರುಷರ ವಾಲಿಬಾಲ್ ತಂಡಗಳು ಮತ್ತು 12 ಮಹಿಳೆಯರ ಥ್ರೋಬಾಲ್ ತಂಡಗಳು ಕಣಕ್ಕಿಳಿದಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ ರೋಚಕ ಪಂದ್ಯಗಳ ಬಳಿಕ, ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಣೆಹಳ್ಳಿಯ ಮುರಕುಂದೇಶ್ವರ್ ಹಣ್ಣೆಹಳ್ಳಿ ತಂಡ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಗ್ರಾಮದ ಅಂಜನಾದ್ರಿ ತಂಡ ದ್ವಿತೀಯ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆಯ ಮುತುರು ಗ್ರಾಮದ ಮಹಾಲಿಂಗೇಶ್ವರ ಬೊಳಿಯ ತಂಡ ತೃತೀಯ ಹಾಗೂ ಶಿವಮೊಗ್ಗ ಜಿಲ್ಲೆಯ ರೆಪ್ಪನಪೇಟೆಯ ಶ್ರೀ ಸಿದ್ದಿ ವಿನಾಯಕ ಟೀಮ್ ನಾಲ್ಕನೇ ಸ್ಥಾನ ಪಡೆದುಕೊಂಡವು.

ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರ್ ಗ್ರಾಮದ ಶ್ರೀ ಕೃಷ್ಣ ಪಟ್ಟೆ ತಂಡ ಚಾಂಪಿಯನ್ ಆಯಿತು. ಬೆಳಗಾವಿ ಜಿಲ್ಲೆಯ ಬಿ.ಬಾಗೇವಾಡಿಯ ರಾಣಿ ಚೆನ್ನಮ್ಮ ತಂಡ ದ್ವಿತೀಯ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರ್ ನ ಶಾಸ್ತಾರ ಪಡುಮಲೆ ತಂಡ ಮೂರನೇ ಸ್ಥಾನ ಮತ್ತು ಧಾರವಾಡ ಜಿಲ್ಲೆಯ ತಿರ್ಲಾಪುರ್ ನ ಶ್ರೀ ರಾಮ್ ತಂಡ ನಾಲ್ಕನೇ ಸ್ಥಾನವನ್ನು ಪಡೆದವು. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಹಂಬಲವಿರುವ ಈ ತಂಡಗಳಿಗೆ ಈ ಪಂದ್ಯಾವಳಿಯು ಅತ್ಯಂತ ಪ್ರಮುಖ ಅರ್ಹತಾ ಸುತ್ತಾಗಿತ್ತು.

ಮೂಡುಬಿದಿರೆ ಜೈನ ಮಠದ ಧಾರ್ಮಿಕ ಮುಖ್ಯಸ್ಥರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಹಾಗೂ ತುಳುಕೂಟದ ಪ್ರೆಸಿಡೆಂಟ್ ಧನಕೀರ್ತಿ ಬಲಿಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪಂದ್ಯಗಳನ್ನು ಉದ್ಘಾಟಿಸಿದರು. ಗ್ರಾಮೀಣ ಪುನಶ್ಚೇತನ ಮತ್ತು ಸಬಲೀಕರಣದ ಈ ಬೃಹತ್ ಪ್ರಯತ್ನದ ಭಾಗವಾಗಿ, ಕರ್ನಾಟಕ ಗೇರು ಉತ್ಪಾದಕರ ಸಂಘವು ಪಾಲ್ಗೊಂಡ ಎಲ್ಲಾ ಆಟಗಾರರಿಗೆ 400 ಕಸಿ ಗೇರು ಸಸಿಗಳನ್ನು ಪ್ರಾಯೋಜಿಸಿತು. ಇದು ಕ್ರೀಡಾಂಗಣದಾಚೆಗೂ ಸುಸ್ಥಿರ ಜೀವನೋಪಾಯ ಮತ್ತು ಪರಿಸರ ಕಾಳಜಿಯನ್ನು ಬಿತ್ತುವ ಮಹತ್ವದ ಹೆಜ್ಜೆಯಾಗಿದೆ.
2004ರಲ್ಲಿ ಪ್ರಾರಂಭವಾದ ಈಶ ಗ್ರಾಮೋತ್ಸವವು ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸಲು, ದೈಹಿಕ ಆರೋಗ್ಯವನ್ನು ಉತ್ತೇಜಿಸಲು ಮತ್ತು ಸಮುದಾಯಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಹಮ್ಮಿಕೊಳ್ಳಲಾಗುವ ವಾರ್ಷಿಕ ಕ್ರೀಡಾ ಹಬ್ಬವಾಗಿದೆ.

ಈ ವರ್ಷದ 18ನೇ ಆವೃತ್ತಿಯು ಗ್ರಾಮೋತ್ಸವದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಸ್ತರಣೆಯಾಗಿದ್ದು, ತಮಿಳುನಾಡು, ಕರ್ನಾಟಕ, ಕೇರಳ ಸೇರಿದಂತೆ ದೇಶದ 10 ರಾಜ್ಯಗಳು ಮತ್ತು 1 ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದೆ. ಅಂದಾಜು 40,000ಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಿರುವ ಈ ಹಬ್ಬದಲ್ಲಿ, ಸುಮಾರು 7,000 ತಂಡಗಳ ಮೂಲಕ 15,000 ಮಹಿಳಾ ಆಟಗಾರರು ಸೇರಿದಂತೆ ಒಟ್ಟು 80,000ಕ್ಕೂ ಅಧಿಕ ಆಟಗಾರರು ಭಾಗವಹಿಸುತ್ತಿದ್ದಾರೆ. ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದಿಂದ ಈಶ ಗ್ರಾಮೋತ್ಸವವು 'ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಸಂಸ್ಥೆ' ಎಂದು ಗೌರವಿಸಲ್ಪಟ್ಟಿದೆ.

Category
ಕರಾವಳಿ ತರಂಗಿಣಿ