ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ 60ಕ್ಕೂ ಹೆಚ್ಚು ನಿವೃತ್ತ ವೀರ ಯೋಧರು ಮತ್ತು ವೀರನಾರಿಯರನ್ನು ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಹಿಲ್ ಸೈಡ್ ಆರ್ಕಿಟೆಕ್ಟ್‌ನ ಎಂಡಿ ರಾಧಾಕೃಷ್ಣ ಬಂಜನ್, ಸೈನಿಕರ ಅಪ್ರತಿಮ ಸೇವೆ ಮತ್ತು ತ್ಯಾಗದಿಂದ ದೇಶವಾಸಿಗಳು ಸುರಕ್ಷಿತವಾಗಿ ಬದುಕುತ್ತಿದ್ದಾರೆ ಎಂದರು. ದೇಶದ ಭದ್ರತೆಗೆ ಬಾಹ್ಯ ಶಕ್ತಿಗಳಷ್ಟೇ ಅಲ್ಲದೆ ಆಂತರಿಕ ಸವಾಲುಗಳೂ ಬೆದರಿಕೆಯಾಗಿವೆ. ದೇಶದ ಪ್ರಗತಿಗೆ ಆಂತರಿಕ ಅಭದ್ರತೆಯ ನಿವಾರಣೆ ಅಗತ್ಯವಿದ್ದು, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿಕಸಿತ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಆಶಿಸಿದರು.
ಸಮಾರಂಭದಲ್ಲಿ ಬಿಎಸ್‌ಎಫ್ ನಿವೃತ್ತ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಶ್ರೀ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ್ ಕುಲಾಲ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಬಿಎಸ್‌ಎನ್‌ಎಲ್ ನಿವೃತ್ತ ಡಿಜಿಎಂ ಐತಪ್ಪ ಮೂಲ್ಯ, ಲೆಫ್ಟಿನೆಂಟ್ ಕಮಾಂಡರ್ ಡಾ. ಯತೀಶ್ ಕುಮಾರ್, ನಿವೃತ್ತ ನಾಯಬ್ ಸುಬೇದಾರ್ ಮೋಹನ್ ಕಡಂಬಾರ್ ಹಾಗೂ ನಿವೃತ್ತ ನಾಯಬ್ ಗೋಪಾಲ್ ಎನ್. ಕುಲಾಲ್ ಭಾಗವಹಿಸಿದ್ದರು. ವೆಂಕಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.