ಮಂಗಳೂರು : ಅಡಿಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಢ ಸಂಕಲ್ಪದೊಂದಿಗೆ, ಉನ್ನತ ಮಟ್ಟದ ಗಣ್ಯರ ನಿಯೋಗವೊಂದು ಶುಕ್ರವಾರ ಹೊಸದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಿತು. ಈ ನಿಯೋಗದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಅಡಿಕೆ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್‌ಚಂದ್ರ ಹಾಗೂ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಉಪಸ್ಥಿತರಿದ್ದರು.
ಭೇಟಿಯ ವೇಳೆ ಅಡಿಕೆ ವಲಯ ಇಂದು ಎದುರಿಸುತ್ತಿರುವ ಗಂಭೀರ ಸವಾಲುಗಳ ಕುರಿತು ಕೇಂದ್ರ ಸಚಿವರಿಗೆ ಸವಿಸ್ತಾರವಾಗಿ ವಿವರಿಸಲಾಯಿತು. ವಿವಿಧ ಎಚ್‌ಎಸ್ ಕೋಡ್‌ಗಳ ಮರೆಯಲ್ಲಿ ನಡೆಯುತ್ತಿರುವ ಅಡಿಕೆಯ ಅಕ್ರಮ ಆಮದು ಹಾಗೂ ಕಳೆದ ಅಕ್ಟೋಬರ್‌ನಿಂದ 'ಹುರಿದ ಅಡಿಕೆ' ಎಂಬ ನೂತನ ವರ್ಗೀಕರಣದ ನೆಪದಲ್ಲಿ ದೇಶದೊಳಗೆ ನುಸುಳುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ಜೊತೆಗೆ, ಕನಿಷ್ಠ ಆಮದು ಬೆಲೆ ನಿಯಮಗಳನ್ನು ಗಾಳಿಗೆ ತೂರಿ, ಸುಂಕ ರಹಿತವಾಗಿ ಅಗ್ಗದ ದರದಲ್ಲಿ ವಿದೇಶಿ ಅಡಿಕೆ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದರಿಂದ ಅಡಿಕೆ ಧಾರಣೆಯಲ್ಲಿ ಉಂಟಾಗಿರುವ ದಿಢೀರ್ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
ಖಾಸಗಿ ವ್ಯಾಪಾರಿಗಳು ತೆರಿಗೆ ವಂಚಿಸುತ್ತಿರುವಾಗ, ಪ್ರಾಮಾಣಿಕವಾಗಿ ವಹಿವಾಟು ನಡೆಸುವ ಸಹಕಾರ ಸಂಘಗಳ ಮೇಲೆ ಬೀಳುತ್ತಿರುವ ಅನಗತ್ಯ ತೆರಿಗೆ ಹೊರೆಯನ್ನು ತಪ್ಪಿಸಲು 'ಒಂದು ದೇಶ, ಒಂದು ತೆರಿಗೆ' ನೀತಿಯನ್ನು ಜಾರಿಗೊಳಿಸುವ ತುರ್ತು ಅಗತ್ಯವನ್ನು ಕ್ಯಾಂಪ್ಕೋ ಅಧ್ಯಕ್ಷರು ಮಂಡಿಸಿದರು. ನಿಯೋಗದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಅಮಿತ್ ಶಾ ಅವರು ಈ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಂತೆಯೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾದ ನಿಯೋಗವು, ರೈತರು ಎದುರಿಸುತ್ತಿರುವ ತೆರಿಗೆ ಹೊರೆಯನ್ನು ಅವರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟಿತು.