image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇಂದ್ರ ಸರ್ಕಾರದಿಂದ ಯುವಜನತೆಗೆ ದ್ರೋಹ: ಡಿವೈಎಫ್‌ಐ ನಾಯಕ ವಿ.ಪಿ.ಪಿ. ಮುಸ್ತಫಾ

ಕೇಂದ್ರ ಸರ್ಕಾರದಿಂದ ಯುವಜನತೆಗೆ ದ್ರೋಹ: ಡಿವೈಎಫ್‌ಐ ನಾಯಕ ವಿ.ಪಿ.ಪಿ. ಮುಸ್ತಫಾ

ಮುಡಿಪು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಶಕ್ತಿಗಳ ಕಾವಲಾಳಾಗಿ ವರ್ತಿಸುವ ಮೂಲಕ ದೇಶದ ಯುವಜನತೆಗೆ ದ್ರೋಹ ಬಗೆಯುತ್ತಿದೆ ಎಂದು ಕೇರಳ ಡಿವೈಎಫ್‌ಐ ಮಾಜಿ ನಾಯಕ ವಿ.ಪಿ.ಪಿ. ಮುಸ್ತಫಾ ಆರೋಪಿಸಿದ್ದಾರೆ. ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದ ಹಕ್ಕಿಗಾಗಿ ಮುಡಿಪುವಿನಲ್ಲಿ ನಡೆದ ಡಿವೈಎಫ್‌ಐ 16ನೇ ಉಳ್ಳಾಲ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಐಕ್ಯತೆ ಹಾಗೂ 'ವಿವಿಧತೆಯಲ್ಲಿ ಏಕತೆ'ಯ ಪರಂಪರೆಯನ್ನು ಕೆಡವಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದರು. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಸರ್ಕಾರಿ ಸಂಸ್ಥೆಗಳನ್ನು ಕಡೆಗಣಿಸಿ ಖಾಸಗಿ ಮತ್ತು ಕಾರ್ಪೊರೇಟ್ ಕ್ಷೇತ್ರಗಳಿಗೆ ಮಣೆ ಹಾಕಿದರೆ ಯುವಜನತೆ ಬೀದಿಗಿಳಿದು ಹೋರಾಟ ರೂಪಿಸಲಿದ್ದಾರೆ ಎಂದು ಎಚ್ಚರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವಾಗತ ಸಮಿತಿಯ ಗೌರವ ಸಲಹೆಗಾರ ರಮೇಶ್ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದರೂ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ರಾಜ್ಯದ ಆರೋಗ್ಯ ಸಚಿವರು ತಮ್ಮ ಸ್ವಕ್ಷೇತ್ರ ಉಳ್ಳಾಲದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಹಿತ ಕಾಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಿಪು ಜಂಕ್ಷನ್‌ನಿಂದ ಆರಂಭಗೊಂಡ ಬೃಹತ್ ಮೆರವಣಿಗೆಯ ಬಳಿಕ ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷ ನಿತಿನ್ ಕುತ್ತಾರ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಂತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಮುಖಂಡರಾದ ರಮೇಶ್ ಪುಂಡರಿಕಾಕ್ಷ, ಅಬೂಬಕರ್ ಜಲ್ಲಿ, ಇಸ್ಮತ್ ಫಜೀರ್, ಅಶ್ರಫ್ ಹರೇಕಳ, ರಝಾಕ್ ಮುಡಿಪು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ