image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ್ಯೂಯಾರ್ಕ್‌ನಲ್ಲಿ ಡಾ. ದಿನಕರ್ ರೈ ಅವರಿಂದ ನೂತನ ಗಾಲ್ಫ್ ಅಲೈನ್‌ಮೆಂಟ್ ಸಾಧನಗಳ ಲೋಕಾರ್ಪಣೆ

ನ್ಯೂಯಾರ್ಕ್‌ನಲ್ಲಿ ಡಾ. ದಿನಕರ್ ರೈ ಅವರಿಂದ ನೂತನ ಗಾಲ್ಫ್ ಅಲೈನ್‌ಮೆಂಟ್ ಸಾಧನಗಳ ಲೋಕಾರ್ಪಣೆ

ಮಂಗಳೂರು : ನ್ಯೂಯಾರ್ಕ್‌ನ ವಿಲೇಜ್ ಕ್ಲಬ್ ಆಫ್ ಲೇಕ್ ಸಕ್ಸೆಸ್‌ನಲ್ಲಿ ಮಂಗಳೂರು ಮೂಲದ ಖ್ಯಾತ ರಕ್ತನಾಳ ಶಸ್ತ್ರಚಿಕಿತ್ಸಕ, ವಿಜ್ಞಾನಿ ಹಾಗೂ ಮಾಜಿ ಕ್ರಿಕೆಟಿಗ ಡಾ. ದಿನಕರ್ ಬಿ. ರೈ ಅವರು ಆವಿಷ್ಕರಿಸಿರುವ 'ರೈಸ್ ಸೂಪರ್ ಟಿ' (Rai's Super Tee) ಮತ್ತು 'ರೈಸ್ ಡಿವೈಸ್' (Rai's Device) ಎಂಬ ಎರಡು ನೂತನ ಗಾಲ್ಫ್ ಅಲೈನ್‌ಮೆಂಟ್ ಸಾಧನಗಳನ್ನು ಜುಲೈ 25 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಗಾಲ್ಫ್ ಆಟದಲ್ಲಿ ನಿಖರತೆ ಹಾಗೂ ಸ್ಥಿರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆಟಗಾರರು ಸಾಮಾನ್ಯವಾಗಿ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ಕಾಲ್ಪನಿಕ ರೇಖೆಯ ಬದಲು, ದೃಶ್ಯರೂಪದಲ್ಲಿ ಅಲೈನ್‌ಮೆಂಟ್‌ ಅನ್ನು ನಿಖರವಾಗಿ ಹಾಗೂ ಸುಲಭವಾಗಿ ಅರ್ಥೈಸಿಕೊಳ್ಳಲು ಇವು ನೆರವಾಗುತ್ತವೆ. 'ರೈಸ್ ಸೂಪರ್ ಟಿ'ಯನ್ನು ಗಾಲ್ಫ್ ಕೋರ್ಸ್‌ನಲ್ಲಿ ನೇರವಾಗಿ ಬಳಸಬಹುದಾದ ದಿಕ್ಕು ಸೂಚಿಸುವ ಟೀ ಆಗಿ ವಿನ್ಯಾಸಗೊಳಿಸಲಾಗಿದ್ದು, 'ರೈಸ್ ಡಿವೈಸ್' ಅನ್ನು ಅಭ್ಯಾಸ ಮೈದಾನದಲ್ಲಿ ತರಬೇತಿಗಾಗಿ ಬಳಸಬಹುದಾಗಿದೆ. ಜ್ಯಾಮಿತೀಯ ತತ್ವಗಳ ಆಧಾರದ ಮೇಲೆ ರೂಪುಗೊಂಡಿರುವ ಈ ಎರಡೂ ಪೇಟೆಂಟ್-ಅರ್ಜಿ ಸಲ್ಲಿಸಲಾದ ಸಾಧನಗಳು ಸರಿಯಾದ ಸ್ವಿಂಗ್ ಪಥ ಮತ್ತು ದೇಹದ ಭಂಗಿಯನ್ನು ಕಾಯ್ದುಕೊಳ್ಳಲು ಪೂರಕವಾಗಿವೆ.

ಆರ್‌ಆರ್ ಗಾಲ್ಫ್ ಅಕಾಡೆಮಿಯ ರಾಜೀವ್ ರುದ್ರಾ ನಿರ್ವಹಿಸಿದ ಸಂವಾದದಲ್ಲಿ ವಿಲೇಜ್ ಕ್ಲಬ್‌ನ ಗಾಲ್ಫ್ ಪ್ರೊ ರೋಬಿ ಮಿಸ್ಟ್ರೆಟ್ಟಾ ಹಾಗೂ ಡಾ. ರೈ ಅಲೈನ್‌ಮೆಂಟ್ ಮಹತ್ವದ ಕುರಿತು ಚರ್ಚಿಸಿದರು. ಭಾರತದ ಖ್ಯಾತ ಗಾಲ್ಫರ್ ಅಮನ್ದೀಪ್ ಝೋಲ್, ಆಡಮ್ ಲೇರ್ಡ್ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ರಿಷಿ ನಾರಾಯಣ್ ಸಾಧನಗಳ ಕುರಿತು ಧನಾತ್ಮಕ ಅಭಿಪ್ರಾಯ ಹಂಚಿಕೊಂಡರು. ಗಲ್‌ವಿಂಗ್ ಮೋಟಾರ್ ಕಾರ್ಸ್ ಸಂಸ್ಥೆಯ ಅಧ್ಯಕ್ಷ ಪೀಟರ್ ಕುಮಾರ್ ಮುಖ್ಯ ಪ್ರಾಯೋಜಕರಾಗಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದರು.

Category
ಕರಾವಳಿ ತರಂಗಿಣಿ