ಮೂಡುಬಿದಿರೆ : ದೇಶದ ಬೃಹತ್ ಉದ್ಯೋಗ ಮೇಳಗಳಲ್ಲಿ ಒಂದಾದ 'ಆಳ್ವಾಸ್ ಪ್ರಗತಿ-2026'ರ 16ನೇ ಆವೃತ್ತಿಯು ವಿದ್ಯಾಗಿರಿ ಆವರಣದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಈ ಮೇಳದಲ್ಲಿ ಭಾಗವಹಿಸಿದ್ದ ಒಟ್ಟು 332 ಕಂಪೆನಿಗಳ ಪೈಕಿ 285 ಕಂಪೆನಿಗಳು 2,394 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ನೀಡಿದ್ದು, 5,935 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್ ಮಾಡಿವೆ. ಎರಡು ದಿನಗಳ ಕಾಲ ನಡೆದ ಈ ಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ ಒಟ್ಟು 15,539 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು.
ಈ ಬಾರಿ ಉದ್ಯೋಗ ಮೇಳದಲ್ಲಿ ಮಹಿಳಾ ಇಂಜಿನಿಯರ್‌ಗಳಿಗೆ ಹೆಚ್ಚಿನ ಆದ್ಯತೆ ದೊರೆತಿದ್ದು, ಎಕ್ಸಿಕೋಮ್ ಟೆಲಿ ಸಿಸ್ಟಮ್ ಸಂಸ್ಥೆಯು 35 ಮಹಿಳಾ ಇಂಜಿನಿಯರ್‌ಗಳನ್ನು ತನ್ನ ಹೈದರಾಬಾದ್ ಘಟಕಕ್ಕೆ ಆಯ್ಕೆ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ತನ್ನ ಒಟ್ಟು ಸಿಬ್ಬಂದಿಯಲ್ಲಿ ಮಹಿಳೆಯರ ಪ್ರಮಾಣವನ್ನು 90%ಕ್ಕೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಕಂಪೆನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಪೂಜಾ ದುಗ್ಗಲ್ ತಿಳಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಕಂಪೆನಿಗಳು ಆಕರ್ಷಕ ವೇತನ ಪ್ಯಾಕೇಜ್ ಘೋಷಿಸಿದ್ದು, ಕೋಡಯಂಗ್ ಸಂಸ್ಥೆಯು ವಾರ್ಷಿಕ ₹8.36 ಲಕ್ಷ ವೇತನಕ್ಕೆ ನಾಲ್ವರನ್ನು ಆಯ್ಕೆ ಮಾಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ₹6 ಲಕ್ಷ ವಾರ್ಷಿಕ ವೇತನದ ಹುದ್ದೆಗಳಿಗೆ 20 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಟಾಟಾ ಎಲೆಕ್ಟ್ರಾನಿಕ್ಸ್ 216 ಅಭ್ಯರ್ಥಿಗಳನ್ನು (ಹೆಚ್ಚಾಗಿ ಮಹಿಳೆಯರು) ಆಯ್ಕೆ ಮಾಡಿಕೊಂಡಿದ್ದರೆ, ಎಚ್‌ಎಲ್ ಮಾಂಡೋ 99, ಎಎನ್‌ಝೆಡ್ 84, ಸೆಜಿಲಿಟಿ 65, ಇಎಕ್ಸ್ಎಲ್ 38, ಫೈಎಸ್ ಡಿಜಿಟಲ್ 32 ಹಾಗೂ ಬುಲ್ಹರ್ 14 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿವೆ.
ಜಾಗತಿಕ ಅವಕಾಶಗಳ ಭಾಗವಾಗಿ ಎಕ್ಸ್‌ಪರ್ಟೀಸ್ ಸಂಸ್ಥೆಯು ಗಲ್ಫ್ ದೇಶಗಳ ಉದ್ಯೋಗ ಹಾಗೂ ಅದಾನಿ ಮುಂದ್ರಾ ಯೋಜನೆಗಾಗಿ 116 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದರೆ, ಎಲೋಜಿಕ್ಸಾ ಸಂಸ್ಥೆಯು ಆಫ್ರಿಕಾದ ಕಾಂಗೋ ದೇಶಕ್ಕಾಗಿ ಒಬ್ಬ ಅಭ್ಯರ್ಥಿಯನ್ನು ನೇಮಕ ಮಾಡಿಕೊಂಡಿದೆ. ಸುಳ್ಯದ ಬಿ.ಕಾಂ ಪದವೀಧರೆ ಶ್ವೇತಾ ಅವರಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್‌ನಲ್ಲಿ ಉದ್ಯೋಗ ಲಭಿಸುವ ಮೂಲಕ ಈ ಮೇಳವು ವೃತ್ತಿಜೀವನದ ಹೊಸ ದಾರಿಯಾಗಿದೆ. ಆಯ್ಕೆ ಮತ್ತು ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ಸಂಪೂರ್ಣ ವಿವರಗಳನ್ನು ಒಂದು ವಾರದೊಳಗೆ ಅಧಿಕೃತ ವೆಬ್‌ಸೈಟ್ (www.alvaspragati.com) ನಲ್ಲಿ ಪ್ರಕಟಿಸಲಾಗುವುದು. ಇದರ ಜೊತೆಗೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಎಸ್‌ಎಮ್‌ಎಸ್ ಮೂಲಕವೂ ಮಾಹಿತಿ ತಲುಪಲಿದೆ.