ಮಂಗಳೂರು: ಬ್ಯಾಂಕಿಂಗ್ ಕ್ಷೇತ್ರವು ಯುವಜನತೆಗೆ ಅತ್ಯುತ್ತಮ ವೃತ್ತಿ ಅವಕಾಶಗಳನ್ನು ಒದಗಿಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಅಭ್ಯಾಸ, ಸಮಯದ ಸಮರ್ಪಕ ನಿರ್ವಹಣೆ ಹಾಗೂ ಯೋಜಿತ ಸಿದ್ಧತೆ ಅತ್ಯಗತ್ಯ ಎಂದು ಕೆನರಾ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕರಾದ ರೊಟೇರಿಯನ್ ಎಂ. ಕೆ. ಸುಬ್ರಾಯ ಪ್ರಭು ಹೇಳಿದರು.
ಅವರು ನಗರದ ಕೆನರಾ ಕಾಲೇಜು (ಸ್ವಾಯತ್ತ) ವೃತ್ತಿ ಮಾರ್ಗದರ್ಶನ ಕೋಶ, ರೋಟರಿ ಕ್ಲಬ್ ಆಫ್ ಮಂಗಳೂರು ನಾರ್ತ್ ಹಾಗೂ ಲಯನ್ಸ್ ಕ್ಲಬ್ ಕಂಕನಾಡಿ–ಪಡೀಲ್ ಸಹಯೋಗದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಬ್ಯಾಂಕಿಂಗ್ ಕರಿಯರ್ ರೆಡಿನೆಸ್’ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು, ವಿವಿಧ ಬ್ಯಾಂಕುಗಳ ನೇಮಕಾತಿ ಪ್ರಕ್ರಿಯೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಹಾಗೂ ಅವುಗಳಿಗೆ ಪರಿಣಾಮಕಾರಿಯಾಗಿ ಸಿದ್ಧತೆ ನಡೆಸುವ ವಿಧಾನಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು. ಸಮಸ್ಯೆ ಪರಿಹಾರ ಕೌಶಲ, ತಾರ್ಕಿಕ ಚಿಂತನೆ, ವೇಗ ಮತ್ತು ನಿಖರತೆಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಅವರು, ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ಆಫ್ ಮಂಗಳೂರು ನಾರ್ತ್‌ನ ಉಪಾಧ್ಯಕ್ಷ ರೊಟೇರಿಯನ್ ಡಾ. ಕೆ. ಶಿವಪ್ರಸಾದ್, ಲಯನ್ಸ್ ಕ್ಲಬ್ ಕಂಕನಾಡಿ–ಪಡೀಲ್‌ನ ಅಧ್ಯಕ್ಷ ಲಯನ್ ಯೋಗೇಶ್ ಶೆಟ್ಟಿ ಹಾಗೂ ಮಾಜಿ ಜಿಲ್ಲಾ ಗವರ್ನರ್ ಲಯನ್ ಕೆ.ಸಿ. ಪ್ರಭು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ವಿದ್ಯಾರ್ಥಿಗಳ ಆಸಕ್ತಿಯನ್ನು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ವೃತ್ತಿಪರ ಕೌಶಲಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಹಾಗೂ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು, ವೃತ್ತಿ ಮಾರ್ಗದರ್ಶನ ಕೋಶದ ಸಂಯೋಜಕಿ ಶ್ರೀಮತಿ ಪುಷ್ಪಲತಾ, ಸಹ-ಸಂಯೋಜಕರಾದ ಶ್ರೀಮತಿ ದೇವಿಕಾ ಪ್ರಭು ಹಾಗೂ ಶ್ರೀಮತಿ ರಾಜಲಕ್ಷ್ಮಿ ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಲತಾ ಸ್ವಾಗತಿಸಿದರು, ಶ್ರೀಮತಿ ದೇವಿಕಾ ಪ್ರಭು ನಿರೂಪಿಸಿದರು ಮತ್ತು ಶ್ರೀಮತಿ ರಾಜಲಕ್ಷ್ಮಿ ವಂದಿಸಿದರು.