ಮಂಗಳೂರು: ನಮ್ಮ ರಾಷ್ಟ್ರದ ಹಿರಿಮೆ, ಗರಿಮೆಗಳ ಪುಸ್ತಕಗಳನ್ನು ಯುವಪೀಳಿಗೆ ಓದುವ ಮೂಲಕ ಸೈನಿಕರ ತ್ಯಾಗ ಮತ್ತು ಪರಿಶ್ರಮದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಕರೆ ನೀಡಿದ್ದಾರೆ.
ಅವರು ದಿಶಾ ಭಾರತ್, ಕೆನರಾ ಕಾಲೇಜು (ಸ್ವಾಯತ್ತ) ಹಾಗೂ ಎನ್‌ಎಸ್‌ಎಸ್ ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನಡೆದ 'ವಾಕಥಾನ್ - ಭಾರತಕ್ಕಾಗಿ ನಡಿಗೆ' ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಗಡಿಯಲ್ಲಿ ಪ್ರಾಣದ ಹಂಗು ತೊರೆದು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರನ್ನು ಕೆಲವರು ಅವಹೇಳನ ಮಾಡುತ್ತಿರುವುದು ಆತಂಕಕಾರಿ ಎಂದ ಅವರು, ಆಧುನಿಕತೆಯ ಭರಾಟೆಯಲ್ಲಿ ನಮ್ಮತನ ಹಾಗೂ ಸಂಸ್ಕೃತಿಯನ್ನು ಮರೆಯಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಟ ಹಾಗೂ ನಿರ್ದೇಶಕ ಸ್ವರಾಜ್ ಶೆಟ್ಟಿ, ನಾವು ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಯಬೇಕು. ಸ್ವಚ್ಛ ಭಾರತದ ಕನಸು ನುಡಿಯಲು ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ತಿಳಿಸಿದರು. ಈ ವೇಳೆ ಆಯೋಜಕರ ಪರವಾಗಿ ಸ್ವರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಪೂರ್ವಭಾವಿಯಾಗಿ ನಡೆದ ಈ ವಾಕಥಾನ್‌ನಲ್ಲಿ 700ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕೊಡಿಯಾಲ್‌ಬೈಲ್‌ನ ಕೆನರಾ ಕಾಲೇಜು ಆವರಣದಿಂದ ಆರಂಭವಾದ ವಾಕಥಾನ್ ಪಿವಿಎಸ್ ವೃತ್ತದ ಮೂಲಕ ಸಾಗಿ ಟಿ.ವಿ. ರಮಣ್ ಪೈ ಸಭಾಂಗಣದ ತನಕು ಸಂಚರಿಸಿ ಸಮಾಪ್ತಿಗೊಂಡಿತು.