ಉಡುಪಿ : ಜಿಲ್ಲೆಯ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಣಕಾಸಿನ ವೈಮನಸ್ಸಿನಿಂದ ಸುಪಾರಿ ನೀಡಿ ಹತ್ಯೆಗೈದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಉತ್ತರ ಪ್ರದೇಶದ ರಾಜು (42), ಉತ್ತರಾಖಂಡದ ಅಜಯ್ ರಸ್ತೋಗಿ (23) ಹಾಗೂ ಬಿಹಾರದ ಜಿಯಾಹುಲ್ ವಜೂಲ್ ಶೇಖ್ (38) ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಹಾಗೂ ಎರ್ಮಾಳಿನಲ್ಲಿ ಬಿಟ್ಟು ಹೋಗಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಡೇವಿಡ್ ಡಿಸೋಜ ನಡೆಸುತ್ತಿದ್ದ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದರ ಜೊತೆ ಹಣಕಾಸಿನ ವಿಚಾರದಲ್ಲಿ ಉಂಟಾಗಿದ್ದ ವೈಮನಸ್ಸೇ ಈ ಕೊಲೆಗೆ ಮುಖ್ಯ ಕಾರಣವಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ಪರಾರಿಯಾಗಲು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಆರೋಪಿಗಳು ಓಡಿಹೋಗಲು ಯತ್ನಿಸಿದರು.
ಬೆನ್ನಟ್ಟಿದ ಪೋಲಿಸರ ಮೇಲೆ ಪ್ರಮುಖ ಆರೋಪಿ ರಾಜು ಗುಂಡು ಹಾರಿಸಿ, ಕಾಪು ಠಾಣೆಯ ಎಸ್ಸೈ ತೇಜಸ್ವಿ ಅವರನ್ನು ಗಾಯಗೊಳಿಸಿದಾಗ, ಪೊಲೀಸರು ಆತ್ಮರಕ್ಷಣೆಗಾಗಿ ರಾಜುನ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದುಕೊಂಡರು. ಸ್ಥಳದಿಂದ ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳನ್ನು ಕುಮಟಾ ಮತ್ತು ಭಟ್ಕಳ ಪೊಲೀಸರ ಸಹಕಾರದಿಂದ ಬಂಧಿಸಲಾಯಿತು. ಕಾರ್ಯಾಚರಣೆ ವೇಳೆ ಗಾಯಗೊಂಡ ಎಸ್ಸೈ ತೇಜಸ್ವಿ ಹಾಗೂ ಆರೋಪಿ ರಾಜು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹತ್ಯೆಗೆ ಸಹಕರಿಸಿದ, ಹಣಕಾಸಿನ ನೆರವು ನೀಡಿದ ಹಾಗೂ ಆಶ್ರಯ ಕೊಟ್ಟವರನ್ನು ಪತ್ತೆಹಚ್ಚಲು ಉಡುಪಿ ಎಸ್ಪಿ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ತಂಡಗಳ ತನಿಖೆ ಮುಂದುವರಿದಿದೆ.