ಮಂಗಳೂರು : ತುಳುನಾಟಕ ರಂಗದ 12 ವಿಭಾಗಗಳ ಕಲಾವಿದರ ಪ್ರತಿನಿಧಿಯಾಗಿ 2003ರಲ್ಲಿ ಸ್ಥಾಪನೆಗೊಂಡು, ಪ್ರಸ್ತುತ 21ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ‘ತುಳುನಾಟಕ ಕಲಾವಿದರ ಒಕ್ಕೂಟ’ದ ವಾರ್ಷಿಕ ಸಂಭ್ರಮ, ‘ತೌಳವ ಪ್ರಶಸ್ತಿ’ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 11.08.2026ರ ಮಂಗಳವಾರ ಸಂಜೆ 5.00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಜರುಗಲಿವೆ ಎಂದು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
2026-27ನೇ ಸಾಲಿನ ಪ್ರತಿಷ್ಠಿತ ‘ತೌಳವ ಪ್ರಶಸ್ತಿ’ಯನ್ನು ಹಿರಿಯ ನಾಟಕಕಾರ, ನಟ, ಕಲಾ ನಿರ್ದೇಶಕ ಹಾಗೂ ಸಾಹಿತಿ ಶ್ರೀಯುತ ತಮ್ಮ ಲಕ್ಷ್ಮಣ ಅವರಿಗೆ ಪ್ರದಾನ ಮಾಡಿ ಪುರಸ್ಕರಿಸಲಾಗುವುದು. ಇದೇ ವೇಳೆ ತುಳು ನಾಟಕ ರಂಗದ ಹಿರಿಯ ಕಲಾವಿದರಾದ ತಿಮ್ಮಪ್ಪ ಶೆಟ್ಟಿ ಬೋಳಾರ, ದಿನೇಶ್ ಮಾಸ್ಟರ್ ಬಿಜ್ಜೈ, ನಾಗೇಶ್ ಸಾಲಿಯಾನ್ ಕಂಕನಾಡಿ, ಉಲ್ಲಾಸ್ ಕದ್ರಿ, ವಿಶ್ವನಾಥ ಚಿತ್ರಾಪುರ ಹಾಗೂ ಶ್ರೀಮತಿ ಸುಜಾತ ಶಕ್ತಿನಗರ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು. 'ನೆಂಪು' ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ದಿ. ಬಾಬು ಭಟ್ ಶರವು, ದಿ. ದಯಾನಂದ ಶರವು, ದಿ. ವಿ.ಜೆ. ಪಾಲ್ ಬೊಕ್ಕಪಟ್ಣ ಮತ್ತು ದಿ. ಜಿ. ಸೀತಾರಾಮ ಶೆಟ್ಟಿ ಪಚ್ಚನಾಡಿ ಅವರನ್ನು ಸ್ಮರಿಸಿಕೊಳ್ಳಲಾಗುವುದು.
ಒಕ್ಕೂಟವು 2009ರಲ್ಲಿ ಕ್ಷೇಮನಿಧಿಯನ್ನು ಸ್ಥಾಪಿಸಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಧನಸಹಾಯ ನೀಡುತ್ತಾ ಬಂದಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಹಯೋಗದೊಂದಿಗೆ 600ಕ್ಕೂ ಹೆಚ್ಚು ನಾಟಕ ಕಲಾವಿದರಿಗೆ ಅಪಘಾತ ವಿಮೆ ಹಾಗೂ ಸಮೂಹ ವೈದ್ಯಕೀಯ ವಿಮೆ ಸೌಲಭ್ಯ ಒದಗಿಸಿದೆ. ಈ ವರ್ಷದಿಂದ ಅಗಲಿದ ಕಲಾವಿದರ ಕುಟುಂಬದವರ ಪ್ರಾಯೋಜಕತ್ವದಲ್ಲಿ ಅವರ ಹೆಸರಿನಲ್ಲಿ ಕಲಾವಿದರನ್ನು ಸನ್ಮಾನಿಸುವ ನೂತನ ಯೋಜನೆಯೂ ಜಾರಿಗೆ ಬರಲಿದೆ.
ಕಾರ್ಯಕ್ರಮದ ದಿನದಂದು ಮಧ್ಯಾಹ್ನ 4.00ರಿಂದ ಸುಗಮ ಸಂಗೀತ ಹಾಗೂ ಲಘು ಉಪಹಾರದ ವ್ಯವಸ್ಥೆ ಇರಲಿದ್ದು, ಸಭಾ ಕಾರ್ಯಕ್ರಮದ ಬಳಿಕ 'ನಮ್ಮ ಕಲಾವಿದೆರ್ ಬೆದ್ರ' ತಂಡದಿಂದ ಉಮೇಶ್ ಮಿಜಾರ್ ಸಾರಥ್ಯದ ‘ವೈರಲ್ ವೈಶಾಲಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ಹಾಗೂ ನಾಟಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಕೇಳಿಕೊಂಡರು. ಪತ್ರಿಕಾಗೋಷ್ಟಿಯಲ್ಲಿ ಕ್ಷೇಮನಿಧಿ ಪ್ರಧಾನ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ಹಾಗೂ ಕೋಶಾಧಿಕಾರಿ ಮೋಹನ ಕೊಪ್ಪಲ ಉಪಸ್ಥಿತರಿದ್ದರು.