ಮಂಗಳೂರು : ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡೋತ್ಸವವಾದ 'ಇಶಾ ಗ್ರಾಮೀಣೋತ್ಸವ 2026'ರ 18ನೇ ಆವೃತ್ತಿಯ ಕರ್ನಾಟಕ ವಿಭಾಗೀಯ ಪಂದ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸ್ವರಾಜ್ ಮೈದಾನ ಪಬ್ಲಿಕ್ ಗ್ರೌಂಡ್‌ನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ. ಆಗಸ್ಟ್ 9, 2026ರ ಭಾನುವಾರ ಬೆಳಿಗ್ಗೆ 9:30ಕ್ಕೆ ಪಂದ್ಯಾವಳಿಗಳು ಉದ್ಘಾಟನೆಗೊಳ್ಳಲಿವೆ ಎಂದು ಇಶಾ ಫೌಂಡೇಶನ್ ನ ಸ್ವಯಂಸೇವಕರಾದ ಲತಾ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ವಿಭಾಗೀಯ ಪಂದ್ಯಾವಳಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳ 18 ಪುರುಷರ ವಾಲಿಬಾಲ್ ತಂಡಗಳು ಹಾಗೂ 12 ಮಹಿಳೆಯರ ಥ್ರೋಬಾಲ್ ತಂಡಗಳನ್ನು ಪ್ರತಿನಿಧಿಸುವ 300ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಭಾಗವಹಿಸಲಿದ್ದಾರೆ ಎಂದರು.
ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸಲು, ದೈಹಿಕ ಆರೋಗ್ಯ ಉತ್ತೇಜಿಸಲು ಮತ್ತು ಸಮುದಾಯಗಳ ನಡುವಿನ ಬಾಂಧವ್ಯ ಬಲಪಡಿಸಲು 2004ರಲ್ಲಿ ಇಶಾ ಔಟ್‌ರೀಚ್ ಈ ವಾರ್ಷಿಕ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಪ್ರಾರಂಭಿಸಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆ ಜೈನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ ಆಳ್ವ, ಧನಲಕ್ಷ್ಮಿ ಕ್ಯಾಶ್ಯೂಸ್‌ನ ಮಾಲೀಕರಾದ ಶ್ರೀ ಶ್ರೀಪತಿ ಭಟ್, ಮೂಡುಬಿದಿರೆ ತಾಲೂಕಿನ ತಹಸೀಲ್ದಾರ್ ಶ್ರೀ ಶ್ರೀಧರ ಎಸ್. ಮುಂಡಲಮನಿ, ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಹಾಗೂ ನಿಶ್ಚಿತಾ ಟವರ್ಸ್ ಮಾಲೀಕರಾದ ನಾರಾಯಣ ಎಂ. ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ವರ್ಷದ 18ನೇ ಆವೃತ್ತಿಯು ಗ್ರಾಮೀಣೋತ್ಸವದ ಇತಿಹಾಸದಲ್ಲೇ ಅತಿ ದೊಡ್ಡ ವಿಸ್ತರಣೆಯಾಗಿದ್ದು, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯನ್ನು ಒಳಗೊಂಡಿದೆ. ದೇಶಾದ್ಯಂತ 40,000ಕ್ಕೂ ಹೆಚ್ಚು ಗ್ರಾಮಗಳನ್ನು ತಲುಪುವ ಗುರಿ ಹೊಂದಲಾಗಿದ್ದು, ಸುಮಾರು 15,000 ಮಹಿಳಾ ಆಟಗಾರರು ಸೇರಿದಂತೆ ಅಂದಾಜು 7,000 ತಂಡಗಳ ಮೂಲಕ 80,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕರ್ನಾಟಕ ವಿಭಾಗೀಯ ಪಂದ್ಯಗಳಲ್ಲಿ ಅರ್ಹತೆ ಪಡೆಯುವ ತಂಡಗಳು ರಾಷ್ಟ್ರೀಯ ಫೈನಲ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿವೆ.
ಭಾರತ ಸರ್ಕಾರದ ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವಾಲಯದಿಂದ 'ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಸಂಸ್ಥೆ' ಎಂದು ಗುರುತಿಸಲ್ಪಟ್ಟಿರುವ ಈಶ ಗ್ರಾಮೀಣೋತ್ಸವವು ಕಳೆದ ಎರಡು ದಶಕಗಳಲ್ಲಿ 35,000ಕ್ಕೂ ಹೆಚ್ಚು ಗ್ರಾಮಗಳ 2.6 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕ್ರೀಡಾಪಟುಗಳಿಗೆ ರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಪತ್ರಿಕಾಗೋಷ್ಠಿಲ್ಲಿ ಸ್ವಯಂಸೇವಕರಾದ ಶ್ರೀಧರ್, ಶ್ರೀಮತಿ ಹರ್ಷ ಮತ್ತು ದೀಪಕ್ ಉಪಸ್ಥಿತರಿದ್ದರು.