image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಗಸ್ಟ್ 10 ರಂದು ಜಿಲ್ಲಾದ್ಯಂತ ಜಂತುಹುಳ ನಿವಾರಣಾ ದಿನ: 5.11 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ

ಆಗಸ್ಟ್ 10 ರಂದು ಜಿಲ್ಲಾದ್ಯಂತ ಜಂತುಹುಳ ನಿವಾರಣಾ ದಿನ: 5.11 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಆಗಸ್ಟ್ 10 ರಂದು 'ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ'ದ ಅಂಗವಾಗಿ ಉಚಿತವಾಗಿ ಆಲ್ಬೆಂಡಝೋಲ್ ಮಾತ್ರೆಗಳನ್ನು ನೀಡಲಾಗುವುದು. ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆ-ಕಾಲೇಜುಗಳು ಮತ್ತು ಅಂಗನವಾಡಿಗಳಲ್ಲಿ ಈ ಮಾತ್ರೆಗಳನ್ನು ವಿತರಿಸಲಾಗುತ್ತಿದ್ದು, ಆಗಸ್ಟ್ 10 ರಂದು ಪಡೆಯಲು ಬಾಕಿ ಇರುವ ಮಕ್ಕಳಿಗೆ ಆಗಸ್ಟ್ 17 ರಂದು ಮಾಪ್–ಅಪ್ ದಿನದಂದು ನೀಡಲಾಗುವುದು. ಈ ಬಾರಿಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 5,11,049 ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿಗೆ ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಮೂಲಕ ಕಡ್ಡಾಯವಾಗಿ ಮಾತ್ರೆ ತಲುಪಿಸಲಾಗುವುದು. ಮಧ್ಯಾಹ್ನದ ಊಟದ ನಂತರ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಉಪಸ್ಥಿತಿಯಲ್ಲಿ ಈ ಚೀಪುವ ಮಾತ್ರೆಯನ್ನು ನೀಡಲಾಗುತ್ತದೆ. 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು (400 ಮಿ.ಗ್ರಾಂ) ಹುಡಿ ಮಾಡಿ ಎದೆ ಹಾಲಿನಲ್ಲಿ ಬೆರೆಸಿ ನೀಡಬೇಕಾಗಿದ್ದು, 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಪೂರ್ಣ ಮಾತ್ರೆಯನ್ನು ಚೀಪಿ ತಿನ್ನಲು ನೀಡಲಾಗುತ್ತದೆ.

ನೈರ್ಮಲ್ಯ ಮತ್ತು ವೈಯಕ್ತಿಕ ಶುಚಿತ್ವದ ಕೊರತೆಯಿಂದ ಹರಡುವ ಜಂತುಹುಳ ಸೋಂಕು ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಹೊಟ್ಟೆನೋವು, ಭೇದಿ ಹಾಗೂ ವಿಟಮಿನ್ ‘ಎ’ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಮಕ್ಕಳ ಶಾರೀರಿಕ ಹಾಗೂ ಭೌದ್ಧಿಕ ಬೆಳವಣಿಗೆ ಕುಂಠಿತಗೊಂಡು, ಶಾಲಾ ಹಾಜರಾತಿ ಮತ್ತು ಪಾಠದಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಈ ಜಂತುಹುಳ ನಿವಾರಣಾ ಮಾತ್ರೆಯು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕಲಿಕಾ ಸಾಮರ್ಥ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಸಾರ್ವಜನಿಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಮಾತ್ರೆ ಕೊಡಿಸಿ ಆರೋಗ್ಯ ಸುಧಾರಣೆಗೆ ಸಹಕರಿಸಬೇಕಾಗಿ ಆರೋಗ್ಯ ಇಲಾಖೆ ಕೋರಿದೆ.

Category
ಕರಾವಳಿ ತರಂಗಿಣಿ