image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂಡುಬಿದಿರೆಯಲ್ಲಿ 16ನೇ ಆವೃತ್ತಿಯ 'ಆಳ್ವಾಸ್ ಪ್ರಗತಿ-2026' ಬೃಹತ್ ಉದ್ಯೋಗ ಮೇಳ ಆರಂಭ

ಮೂಡುಬಿದಿರೆಯಲ್ಲಿ 16ನೇ ಆವೃತ್ತಿಯ 'ಆಳ್ವಾಸ್ ಪ್ರಗತಿ-2026' ಬೃಹತ್ ಉದ್ಯೋಗ ಮೇಳ ಆರಂಭ

ಮೂಡುಬಿದಿರೆ: ದೇಶದ ಅತಿದೊಡ್ಡ ಉದ್ಯೋಗ ಮೇಳವೆಂದು ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ–2026’ಕ್ಕೆ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಯುವಜನರು ಕೌಶಲ್ಯಾಭಿವೃದ್ಧಿ, ವೃತ್ತಿಪರ ಸಂಪರ್ಕ ಹಾಗೂ ಕೃತಕ ಬುದ್ಧಿಮತ್ತೆಯ (ಎಐ) ಜವಾಬ್ದಾರಿಯುತ ಬಳಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. “ಶಿಕ್ಷಣ ಪಾಸ್‌ಪೋರ್ಟ್ ಇದ್ದಂತೆ, ಕೌಶಲ್ಯ ವೀಸಾದಂತೆ” ಎಂದು ಬಣ್ಣಿಸಿದ ಅವರು, ಕೃತಕ ಬುದ್ಧಿಮತ್ತೆಯನ್ನು ಉದ್ಯೋಗ ಕಸಿಯುವ ತಂತ್ರಜ್ಞಾನವೆಂದು ನೋಡದೆ, ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಸಾಧನವಾಗಿ ಬಳಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈ ಉಪಕ್ರಮವು 'ವಿಕಸಿತ ಭಾರತ' ನಿರ್ಮಾಣಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂಆರ್‌ಜಿ ಗ್ರೂಪ್ ಸಂಸ್ಥಾಪಕ ಡಾ. ಕೆ. ಪ್ರಕಾಶ್ ಶೆಟ್ಟಿ, ಉದ್ಯೋಗ ಕ್ಷೇತ್ರದಲ್ಲಿ ಶಿಕ್ಷಣಕ್ಕಿಂತ ಸಾಮಾನ್ಯ ಜ್ಞಾನ ಹಾಗೂ ಪ್ರಾಯೋಗಿಕ ಜ್ಞಾನವೇ ಹೆಚ್ಚು ಪ್ರಮುಖ ಎಂದರು. ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಮೇಳದ ಆರಂಭಿಕ ದಿನಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದ ದಿವಂಗತ ಎ.ಕೆ. ಮಹೇಶ್ ಶೇಖರ್ ಅವರ ಸ್ಮರಣಾರ್ಥ ಉದ್ಘಾಟನಾ ವೇದಿಕೆಯನ್ನು ಸಮರ್ಪಿಸಲಾಯಿತು.

ಸಮಾರಂಭದಲ್ಲಿ ಕರಾವಳಿಯ ಉದ್ಯಮ ಕ್ಷೇತ್ರದ ಸಾಧಕರಾದ ಕೆ.ಎನ್. ಜನಾರ್ದನ, ಡಾ. ಕೆ. ಪ್ರಕಾಶ್ ಶೆಟ್ಟಿ, ಕುಸುಮೋದರ ಡಿ. ಶೆಟ್ಟಿ, ವಿನ್ಸೆಂಟ್ ಕುಟಿನ್ಹಾ ಹಾಗೂ ಮೊಹಮ್ಮದ್ ಅಶ್ಫಾಕ್ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಈ ಮೇಳವು ದೈಹಿಕ ಸವಾಲು ಎದುರಿಸುತ್ತಿದ್ದ ವಾಮದಪದವಿನ ಭವ್ಯಶ್ರೀ ಎಂಬ ಯುವತಿಗೆ ಹೊಸ ಭರವಸೆ ನೀಡಿದೆ. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದ ಎಂ.ಕಾಮ್ ಪದವೀಧರೆ ಭವ್ಯಶ್ರೀ, ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಆಗಮಿಸಿ ಸಂದರ್ಶನ ಎದುರಿಸಿ ಮೈಸೂರಿನ ರೆಡ್ಡೀಸ್ ಫೌಂಡೇಷನ್‌ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಉದ್ಯೋಗ ಮೇಳದ ಮೊದಲ ದಿನದಂದು 326 ಕಂಪನಿಗಳು ಭಾಗವಹಿಸಿದ್ದು, ಒಟ್ಟು 13,016 ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಇದರಲ್ಲಿ 13,247 ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹಾಗೂ 83 ಅಭ್ಯರ್ಥಿಗಳು ಸ್ಪಾಟ್ ನೋಂದಣಿ ಮಾಡಿಸಿಕೊಂಡಿದ್ದರು.

Category
ಕರಾವಳಿ ತರಂಗಿಣಿ