image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಿಂದ ಶೈಕ್ಷಣಿಕ ಸಹಯೋಗ : ಎರಡು ಮಹತ್ವದ ಒಡಂಬಡಿಕೆಗೆ ಸಹಿ

ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಿಂದ ಶೈಕ್ಷಣಿಕ ಸಹಯೋಗ : ಎರಡು ಮಹತ್ವದ ಒಡಂಬಡಿಕೆಗೆ ಸಹಿ

ಮಂಗಳೂರು : ಸಮಗ್ರ ನರ್ಸಿಂಗ್ ಶಿಕ್ಷಣ, ಶೈಕ್ಷಣಿಕ ಸಂಶೋಧನೆ ಹಾಗೂ ಸಮುದಾಯ ಕೇಂದ್ರಿತ ಆರೋಗ್ಯ ಸೇವೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು (FMCON) ಸಾಂತ್ವನ ಆರೈಕೆ (ಪಾಲಿಯೇಟಿವ್ ಕೇರ್) ಹಾಗೂ ಕೌನ್ಸಿಲಿಂಗ್ ಕ್ಷೇತ್ರದಲ್ಲಿ ಎರಡು ಪ್ರಮುಖ ತಿಳುವಳಿಕಾ ಒಡಂಬಡಿಕೆಗಳಿಗೆ (MoU) ಸಹಿ ಹಾಕಿದೆ. ವಾಮಂಜೂರಿನ ‘ಅವೇ ಮಾರಿಯಾ ಹಾಸ್ಪಿಸ್’ ಹಾಗೂ ‘ರೋಶ್ನಿ ನಿಲಯ – ಸ್ಕೂಲ್ ಆಫ್ ಸೋಶಿಯಲ್ ವರ್ಕ್’ ಸಂಸ್ಥೆಗಳೊಂದಿಗೆ 2026ರ ಆಗಸ್ಟ್ 5 ಮತ್ತು 7 ರಂದು ಈ ಒಪ್ಪಂದಗಳು ನಡೆದಿವೆ.

ಈ ಸಹಯೋಗವು ಶೈಕ್ಷಣಿಕ ಗುಣಮಟ್ಟ, ಜಂಟಿ ಸಂಶೋಧನೆ, ಕಲಿಕೆ, ವಿದ್ಯಾರ್ಥಿ ಮತ್ತು ಉಪನ್ಯಾಸಕರ ವಿನಿಮಯ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDG) ಅನುಗುಣವಾದ ಸಮುದಾಯ ಸೇವಾ ಯೋಜನೆಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (FMCI) ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಈ ಒಪ್ಪಂದಗಳನ್ನು ಅಧಿಕೃತವಾಗಿ ಅನುಮೋದಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಧನ್ಯಾ ದೇವಸ್ಯ ಅವರ ನೇತೃತ್ವದಲ್ಲಿ ಈ ಮುನ್ನೋಟ ಸಾಕಾರಗೊಂಡಿದೆ.

ಆಗಸ್ಟ್ 5 ರಂದು ನಡೆದ ಕಾರ್ಯಕ್ರಮದಲ್ಲಿ ಅವೇ ಮಾರಿಯಾ ಪಾಲಿಯೇಟಿವ್ ಕೇರ್ ಸೆಂಟರ್‌ನ ಸಂಸ್ಥಾಪಕ ನಿರ್ದೇಶಕಿ ಡಾ. ಲವೀನಾ ನೊರೊನ್ಹಾ ಹಾಗೂ ಸಮಾಜ ಸೇವಕಿ ಸೆನಿತಾ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಡಾ. ಲವೀನಾ, ಸಾಂತ್ವನ ಆರೈಕೆಯು ಕೇವಲ ವೈದ್ಯಕೀಯ ಉಪಚಾರಕ್ಕೆ ಸೀಮಿತವಾಗಿರದೆ, ತೀವ್ರ ಅಥವಾ ಅಂತಿಮ ಹಂತದ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಘನತೆ, ಕರುಣೆ ಮತ್ತು ನೆಮ್ಮದಿಯ ಜೀವನ ಒದಗಿಸುವ ಅಗತ್ಯ ಸೇವೆಯಾಗಿದೆ ಎಂದರು.

ಆಗಸ್ಟ್ 7 ರಂದು ರೋಶ್ನಿ ನಿಲಯ ಸಂಸ್ಥೆಯ ಐಕ್ಯೂಎಸಿ ಸಂಯೋಜಕಿ ಡಾ. ಸರಿತಾ ಡಿಸೋಜಾ ಮತ್ತು ಎಂ.ಎಸ್ಸಿ ಕೌನ್ಸಿಲಿಂಗ್ ವಿಭಾಗದ ಮುಖ್ಯಸ್ಥೆ ಡಾ. ರೋಸಾ ನಿಮ್ಮಿ ಮ್ಯಾಥ್ಯೂ ಅವರೊಂದಿಗೆ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಸಂಸ್ಥೆಯು 1960 ರಲ್ಲಿ ಸ್ಥಾಪನೆಯಾಗಿದ್ದು, ಸಾಮಾಜಿಕ ಕೆಲಸ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದೆ. ಈ ಒಪ್ಪಂದವು ಮಾನಸಿಕ ಆರೋಗ್ಯ ಜಾಗೃತಿ, ಕೌನ್ಸಿಲಿಂಗ್ ಶಿಕ್ಷಣ ಮತ್ತು ಸಮುದಾಯ ಸೇವಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ವಂದನೀಯ ಫಾದರ್ ಫಾಸ್ಟಿನ್ ಲೋಬೋ, ವೈದ್ಯಕೀಯ ಚಿಕಿತ್ಸೆಯು ರೋಗ ಗುಣಪಡಿಸುವುದರ ಜೊತೆಗೆ ರೋಗಿಗಳಲ್ಲಿ ಭರವಸೆ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವ ಕಾರ್ಯ ಮಾಡಬೇಕು ಎಂದರು. 146 ವರ್ಷಗಳ ಇತಿಹಾಸವಿರುವ ಫಾದರ್ ಮುಲ್ಲರ್ ಸಂಸ್ಥೆ ಹಾಗೂ 6 ದಶಕಗಳ ಇತಿಹಾಸವಿರುವ ರೋಶ್ನಿ ನಿಲಯದ ಜಂಟಿ ಹೆಜ್ಜೆಯು ಕರಾವಳಿ ಭಾಗದ ಜನರಿಗೆ ಉತ್ತಮ ಆರೋಗ್ಯ, ಕೌನ್ಸಿಲಿಂಗ್ ಮತ್ತು ಸಾಮಾಜಿಕ ಸೇವೆ ತಲುಪಿಸಲು ನೆರವಾಗಲಿದೆ ಎಂದು ಹೇಳಿದರು.

ಇತ್ತೀಚೆಗಷ್ಟೇ ಸೆಂಟ್ ಅಲೋಶಿಯಸ್ ವಿಶ್ವವಿದ್ಯಾಲಯ, ಯೇನಪೋಯ ವಿಶ್ವವಿದ್ಯಾಲಯ ಹಾಗೂ ಆವಿಷ್ಕಾರ್ ಯೋಗ ಕೇಂದ್ರದೊಂದಿಗೂ ಒಪ್ಪಂದ ಮಾಡಿಕೊಂಡಿದ್ದ ಫಾದರ್ ಮುಲ್ಲರ್ ಸಂಸ್ಥೆಯು ತನ್ನ ಶೈಕ್ಷಣಿಕ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ. ಒಪ್ಪಂದದ ವೇಳೆ ಉಪಪ್ರಾಂಶುಪಾಲೆ ಡಾ. ಅಗೇನ್ಸ್ ಇ. ಜೆ., ಪ್ರೊಫೆಸರ್‌ಗಳಾದ ಡಾ. ಶೈಸಿಲ್ ಮ್ಯಾಥ್ಯೂ, ಶ್ರೀ ಅಶ್ವಿನ್ ಬ್ರೋಮಿಯೋ, ಚರಿತಾ ಕ್ಲಾವಿಯಾ ಲೂಯಿಸ್ ಹಾಗೂ ವಿವಿಧ ನರ್ಸಿಂಗ್ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ