ಮಂಗಳೂರು : ಪಡೀಲ್ನ ಪ್ರಜಾಸೌಧದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್ಸಿ-ಎಸ್ಟಿ) ಕುಂದುಕೊರತೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಗೈರುಹಾಜರಾದ ಹಿನ್ನೆಲೆಯಲ್ಲಿ ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಭೆಯನ್ನು ರದ್ದುಗೊಳಿಸಿ ಮುಂದೂಡುವಂತೆ ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ವಿವಿಧ ಭಾಗಗಳ ವಿಪತ್ತು ಪರಿಹಾರ ಕಾರ್ಯಾಚರಣೆ ಪರಿಶೀಲನೆಗೆ ಜಿಲ್ಲಾಧಿಕಾರಿ ದರ್ಶನ್ ಅವರು ತೆರಳಿದ್ದರು. ಅವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಲು ಮುಂದಾದಾಗ ದಲಿತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುಮಾರು ಒಂದೂವರೆ ವರ್ಷಗಳ ಬಳಿಕ, ಒಂಬತ್ತು ದಿನಗಳ ಪೂರ್ವ ನೋಟೀಸ್ನೊಂದಿಗೆ ಕರೆಯಲಾಗಿದ್ದ ಈ ಸಭೆಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಹಲವು ಗ್ರಾಮೀಣ ಭಾಗಗಳಿಂದ ದಲಿತರು ತಮ್ಮ ಸ್ವಂತ ಖರ್ಚಿನಲ್ಲಿ ಹಾಗೂ ಕೆಲಸಕ್ಕೆ ರಜೆ ಹಾಕಿ ಆಗಮಿಸಿದ್ದರು. "ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರ ಉಪಸ್ಥಿತಿ ಇಲ್ಲದಿದ್ದರೆ ಜ್ವಲಂತ ಸಮಸ್ಯೆಗಳು ಮತ್ತು ಮೀಸಲಾತಿ ಕುರಿತ ವಿಷಯಗಳು ಇತ್ಯರ್ಥವಾಗಲು ಸಾಧ್ಯವಿಲ್ಲ. ಹೀಗಾಗಿ ಸಭೆ ನಡೆಸುವುದು ನಾಮಕಾವಸ್ಥೆಯಾಗುತ್ತದೆ" ಎಂದು ದಲಿತ ಸಂಘರ್ಷ ಸಮಿತಿಯ (ಕೃಷ್ಣಪ್ಪ ಸ್ಥಾಪಿತ) ರಘು ಎಕ್ಕೂರು, ಕೃಷ್ಣಾನಂದ, ಸುಪ್ರೀತಾ ಕೃಷ್ಣಾಪುರ ಹಾಗೂ ಶೇಖರ್ ಲಾಯಿಲ ಆಕ್ರೋಶ ಹೊರಹಾಕಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಮಲತಾ ಅವರು ಮುಖಂಡರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ಸಭೆ ಮುಂದೂಡುವಂತೆ ಒಕ್ಕೂಟದಿಂದ ಒತ್ತಾಯ ಕೇಳಿಬಂತು. ಬಳಿಕ ಅಪರ ಜಿಲ್ಲಾಧಿಕಾರಿ ರಾಜು ಅವರು ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಸಭೆಯನ್ನು ಆಗಸ್ಟ್ 20ಕ್ಕೆ ಮರುನಿಗದಿಪಡಿಸಲಾಗಿದೆ ಎಂದು ಪ್ರಕಟಿಸಿದರು. ತದನಂತರ ದಲಿತ ಮುಖಂಡರು ‘ಜೈ ಭೀಮ್’ ಘೋಷಣೆ ಕೂಗುತ್ತಾ ಸಭಾಂಗಣದಿಂದ ಹೊರನಡೆದರು.