ಮಂಗಳೂರು: ಸ್ಕೂಲ್ ಆಫ್ ಸೋಶಿಯಲ್ ವರ್ಕ್ (ಸ್ವಾಯತ್ತ) ರೋಶನಿ ನಿಲಯ ಕಾಲೇಜಿನ ಸಭಾಂಗಣದಲ್ಲಿ 2026ರ ಆಗಸ್ಟ್ 5 ರಂದು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ "ಆಟಿಡೊಂಜಿ ದಿನ" ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪರೀಕ್ಷಾ ನಿಯಂತ್ರಕರಾದ ಡಾ. ಸಿಸಿಲಿಯಾ ಫರೀದಾ ಗೋವಿಯಸ್ ವಹಿಸಿದ್ದರು. ತುಳುನಾಡಿನ ಸಾಂಸ್ಕೃತಿಕ ಹಾಗೂ ಜಾನಪದ ವಿದ್ವಾಂಸರಾದ ಕೆ. ಕೆ. ಪೇಜಾವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿಂಗಾರ ಬಿಡಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು, ಆಟಿ ತಿಂಗಳ ಪ್ರಾಮುಖ್ಯತೆ, ಅಲ್ಲಿನ ಆಚಾರ-ವಿಚಾರಗಳು, ಈ ಋತುವಿನಲ್ಲಿ ಎದುರಾಗುವ ಸವಾಲುಗಳು ಮತ್ತು ಈ ಕಾಲಘಟ್ಟವು ಹೇಗೆ ವಿಶಿಷ್ಟ ಖಾದ್ಯಗಳು, ಜಾನಪದ ಆಟಗಳು ಹಾಗೂ ಸಾಹಿತ್ಯಕ್ಕೆ ಜನ್ಮ ನೀಡಿತು ಎಂಬುದನ್ನು ಹಂಚಿಕೊಂಡರು. ಅಲ್ಲದೇ ವೀಳ್ಯದೆಲೆಯ ಸಾಂಸ್ಕೃತಿಕ ನಂಬಿಕೆಗಳು, ಮದುವೆಯಾದ ಹೆಣ್ಣುಮಕ್ಕಳು ತವರು ಮನೆಗೆ ಭೇಟಿ ನೀಡುವ ಪದ್ಧತಿ, ಆಟಿ ಕಳೆಂಜ ಪರಂಪರೆ ಹಾಗೂ ಆಟಿ ತಿಂಗಳಲ್ಲಿ ಸೇವಿಸುವ ಕಷಾಯದ ಗಿಡಮೂಲಿಕೆಗಳ ಆರೋಗ್ಯಕರ ಪ್ರಯೋಜನಗಳ ಕುರಿತು ಬೆಳಕು ಚೆಲ್ಲಿದರು. ಪದವಿ ವಿದ್ಯಾರ್ಥಿ ಶಂತನ್ ರೈ ಆಟಿ ಆಚರಣೆಯ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮೀನಾ ಮೊಂತೆರೊ, ಪದವಿ ವಿಭಾಗದ ಡೀನ್ ಡಾ. ಸ್ಯಾಂಡ್ರಾ ಲೋಬೋ, IQAC ಸಂಯೋಜಕಿ ಡಾ. ಸರಿತಾ ಡಿಸೋಜಾ, IQAC ಸಹ-ಸಂಯೋಜಕಿ ಡಾ. ರೋಸಾ ಹಾಗೂ ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಾರಿಕ್ ಅಂಕಿತಾ ಉಪಸ್ಥಿತರಿದ್ದರು.