ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮದ್ಯದೊಂದಿಗೆ ಆಹಾರ ಪೂರೈಸುವ ಬಾರ್‌ಗಳ ಮೇಲೆ ಬುಧವಾರ ರಾತ್ರಿ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಾರ್‌ಗೆ ಆಗಮಿಸಿದ ಗ್ರಾಹಕರ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಲಾಯಿತು. ಅಲ್ಲದೆ, ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸದಂತೆ ಬಾರ್ ಸನ್ನದುದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ಪೂರೈಸಿದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ನಿರ್ದೇಶನದಂತೆ ನಡೆದ ಈ ದಾಳಿಯಲ್ಲಿ, ಮಂಗಳೂರು ಉಪವಿಭಾಗ 1 ರ ಉಪ ಅಧೀಕ್ಷಕಿ ಗಾಯತ್ರಿ ಸಿ.ಹೆಚ್. ನೇತೃತ್ವ ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಚೇತನ್ ಕುಮಾರ್, ಪ್ರತಿಭಾ, ಮಿಲ್ಲರ್ ಜಾನ್ಸನ್ ಡಿಸೋಜ, ಕಮಲ, ದತ್ತಗುರು, ಉಪನಿರೀಕ್ಷಕರಾದ ರಜಾಕ್, ಜಯಪ್ಪ ಹಾಗೂ ಸಿಬ್ಬಂದಿಗಳಾದ ಸಂದೀಪ್, ಸಂಧ್ಯಾ, ಶಿವಲಿಂಗಪ್ಪ, ಆನಂದ್, ಮಂಜಪ್ಪ ಮತ್ತು ದೇವರಾಜ್ ಪಾಲ್ಗೊಂಡಿದ್ದರು.