image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿ ಜೀವನವೇ ಯಶಸ್ಸಿಗೆ ಭದ್ರ ಬುನಾದಿ – ಡಾ. ತುಕಾರಾಮ ಪೂಜಾರಿ

ವಿದ್ಯಾರ್ಥಿ ಜೀವನವೇ ಯಶಸ್ಸಿಗೆ ಭದ್ರ ಬುನಾದಿ – ಡಾ. ತುಕಾರಾಮ ಪೂಜಾರಿ

ಮೂಡುಬಿದಿರೆ: ವಿದ್ಯಾರ್ಥಿ ಜೀವನವೇ ವ್ಯಕ್ತಿತ್ವ ರೂಪುಗೊಳ್ಳುವ ಅತ್ಯಂತ ಮಹತ್ವದ ಹಂತವಾಗಿದ್ದು, ಈ ಅವಧಿಯಲ್ಲಿ ಬೆಳೆಸಿಕೊಳ್ಳುವ ಓದುವ ಹವ್ಯಾಸ, ಸೃಜನಶೀಲತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಭವಿಷ್ಯದ ಯಶಸ್ವಿ ಬದುಕಿಗೆ ಭದ್ರ ಬುನಾದಿಯಾಗುತ್ತದೆ ಎಂದು ಖ್ಯಾತ ಸಂಶೋಧಕ ಡಾ. ತುಕಾರಾಮ ಪೂಜಾರಿ ತಿಳಿಸಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕಲಾ ಸಂಘ, ಸಾಹಿತ್ಯ ಸಂಘ, ಮತದಾರರ ಸಾಕ್ಷರತಾ ಸಂಘ ಹಾಗೂ ರೋವರ್ಸ್-ರೇಂಜರ್ಸ್ ಘಟಕಗಳ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದೊಂದಿಗೆ ಜೀವನ ಮೌಲ್ಯಗಳ ಅರಿವೂ ಅಷ್ಟೇ ಅಗತ್ಯ. ಬದುಕಿನಲ್ಲಿ ಕೇವಲ ಅಂಕಗಳಿಕೆಯೇ ಯಶಸ್ಸಿನ ಮಾನದಂಡವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಪ್ರತಿಭೆ, ಆಸಕ್ತಿ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉಪಯುಕ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ, "ಅನುಭವ ಸಿಹಿ ಅಲ್ಲ, ಅದರ ನೆನಪೇ ಸಿಹಿ" ಎಂಬಂತೆ ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ಅನುಭವಗಳು ಬದುಕಿನ ಅಮೂಲ್ಯ ಸಂಪತ್ತಾಗಿವೆ. ನಮಗಾಗಿ ಬದುಕಿದರೆ ಸಾಮಾನ್ಯ ವ್ಯಕ್ತಿಗಳಾಗುತ್ತೇವೆ, ಇತರರಿಗಾಗಿ ಬದುಕಿದರೆ ಅಸಾಮಾನ್ಯ ವ್ಯಕ್ತಿಗಳಾಗುತ್ತೇವೆ. ಕಾಲೇಜಿನ ವಿವಿಧ ಸಂಘಗಳು ವಿದ್ಯಾರ್ಥಿಗಳ ನಾಯಕತ್ವ, ಸಾಹಿತ್ಯಾಸಕ್ತಿ, ಕಲಾ ಕೌಶಲ್ಯ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉತ್ತಮ ವೇದಿಕೆಯಾಗಿದ್ದು, ಎಲ್ಲ ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಮಾರಂಭದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ವಿವಿಧ ಸಂಘಗಳ ಸಂಯೋಜಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಪ್ತಮಿ ಸ್ವಾಗತಿಸಿ, ಮಧು ಅತಿಥಿ ಪರಿಚಯ ಮಾಡಿದರು. ಲಿಖಿತ ಕಾರ್ಯಕ್ರಮ ನಿರೂಪಿಸಿ, ಶ್ರವಣ್ ಧನ್ಯವಾದ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು.

Category
ಕರಾವಳಿ ತರಂಗಿಣಿ