ಉಜಿರೆ: ಬೆಂಗಳೂರಿನ ಸೋಸಲೆ ವ್ಯಾಸರಾಜ ಮಠದ ಪೂಜ್ಯ ಶ್ರೀ ಶ್ರೀ ೧೦೦೮ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳನ್ನು ಭವ್ಯ ಮೆರವಣಿಗೆಯ ಮೂಲಕ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ, ಪಾದಪೂಜೆ ನೆರವೇರಿಸಿದರು. ಬಳಿಕ ಸಂಪ್ರದಾಯದಂತೆ ಶ್ರೀಗಳನ್ನು ಹೆಗ್ಗಡೆಯವರ ನಿವಾಸ ‘ಬೀಡು’ವಿಗೆ ಕರೆತಂದು ಗೌರವಾರ್ಪಣೆ ಮಾಡಲಾಯಿತು. ಈ ವೇಳೆ ಧರ್ಮಸ್ಥಳದ ಚತುರ್ವಿಧ ದಾನಪರಂಪರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆಗಳ ಕಾಯಕಲ್ಪ, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಕುರಿತು ಡಿ. ಹರ್ಷೇಂದ್ರ ಕುಮಾರ್ ಅವರು ಶ್ರೀಗಳಿಗೆ ಮಾಹಿತಿ ನೀಡಿದರು. ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಲೋಕಕಲ್ಯಾಣ ಸೇವಾ ಕಾರ್ಯಕ್ರಮಗಳಿಗೆ ಪೂಜ್ಯ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ದೇವಳದ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್, ಮಣೆಗಾರ್ ವಸಂತ ಭಟ್ ಹಾಗೂ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.