ವೇಣೂರು : ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ (ಎಸ್‌ಡಿಎಂ ಐಟಿಐ) 41ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕ್ಷೇಮವನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರದ್ಧಾ ಅಮಿತ್, ಸಂಸ್ಥೆಯ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಹಾಗೂ ಉತ್ತಮ ಕಾರ್ಯಕ್ಷಮತೆಗೆ ಹೆಸರಾಗಿದ್ದು, ಉದ್ಯಮ ರಂಗದಲ್ಲಿ ಈ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸುರಕ್ಷಾ ಕರಿಯರ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ರೈ ಮಾತನಾಡಿ, ವೃತ್ತಿಜೀವನದ ಆರಂಭದ ವರ್ಷಗಳಲ್ಲಿ ಸಂಬಳಕ್ಕಿಂತ ತಾಂತ್ರಿಕ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಕೌಶಲ್ಯವಿದ್ದರೆ ಉತ್ತಮ ಅವಕಾಶಗಳು ಹಾಗೂ ಸಂಬಳ ತಾನಾಗಿಯೇ ಒಲಿದುಬರುತ್ತವೆ ಎಂದು ಸಲಹೆ ನೀಡಿದರು. ಪದ್ಮಂಭ ಗ್ರೂಪ್ಸ್‌ನ ಮಾಲೀಕರಾದ ಜಿನರಾಜ್ ಜೈನ್ ಮಾತನಾಡಿ, ಯುವಕರು ಕೇವಲ ಉದ್ಯೋಗ ಅರಸದೆ ಸ್ವಯಂ ಉದ್ಯೋಗದ ಮೂಲಕ ಇತರರಿಗೆ ಕೆಲಸ ನೀಡುವ ಉದ್ಯಮಿಗಳಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ, ಸಂಸ್ಥೆಯು ಶಿಸ್ತು, ಗುಣಮಟ್ಟದ ಶಿಕ್ಷಣ ಮತ್ತು ಅತ್ಯುತ್ತಮ ಕ್ಯಾಂಪಸ್ ನೇಮಕಾತಿಗೆ ಹೆಸರುವಾಸಿಯಾಗಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ದೇಶದ ಯಾವುದೇ ಉದ್ಯಮದಲ್ಲೂ ಯಶಸ್ಸು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಸನ್ನಕುಮಾರ್ ಪ್ರಾರ್ಥನೆ ನೆರವೇರಿಸಿ, ರತ್ನಾಕರ ರಾವ್ ಎಚ್. ಸ್ವಾಗತಿಸಿದರು. ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ಸತೀಶ್ ವಂದಿಸಿದರು.