ಮಂಗಳೂರು : ಮಂಗಳೂರಿನ ‘ನಮ್ಮ ಕುಡ್ಲ’ ಬಿ.ಪಿ. ಕರ್ಕೇರ ಸಭಾಂಗಣದಲ್ಲಿ ‘ಪುರಾಣ ಲೋಕ’ ಕಾವ್ಯ ವಾಚನ-ಪ್ರವಚನ ಕಾರ್ಯಕ್ರಮದ ಶುಭಾರಂಭ ಹಾಗೂ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ಕನ್ನಡ-ತುಳು ಭಕ್ತಿಗೀತೆಗಳ ಸಂಕಲನ ಬಿಡುಗಡೆಯ ಅವಳಿ ಸಮಾರಂಭ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ 'ಪುರಾಣ ಲೋಕ'ದ ಟ್ರೇಲರ್ ಬಿಡುಗಡೆ ಮಾಡಿದ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, "ಭಾರತೀಯ ಪುರಾಣಗಳಲ್ಲಿ ಅಪಾರವಾದ ಜೀವನ ಮೌಲ್ಯಗಳಿದ್ದು, ಅವು ಸಾರ್ವಕಾಲಿಕವಾಗಿವೆ. ಎಳೆಯರಿಗೆ ಪೌರಾಣಿಕ ಕಾವ್ಯಗಳ ಅಧ್ಯಯನದಲ್ಲಿ ಆಸಕ್ತಿ ಮೂಡಿಸಿದರೆ ಇಂದಿನ ಪೀಳಿಗೆಯಲ್ಲೂ ಪುರಾಣ ಪುರುಷರ ಆದರ್ಶಗಳನ್ನು ಪಾಲಿಸುವ ಮನಸ್ಥಿತಿಯನ್ನು ಬೆಳೆಸಬಹುದು" ಎಂದು ಹೇಳಿದರು. ಮನೆ ಮನೆಗಳಲ್ಲಿ ಹಾಗೂ ಮಠ-ಮಂದಿರಗಳಲ್ಲಿ ಕಡಿಮೆಯಾಗುತ್ತಿರುವ ಪುರಾಣ ಪ್ರವಚನಗಳನ್ನು 'ನಮ್ಮ ಕುಡ್ಲ' ವಾಹಿನಿಯ ಮೂಲಕ ಪುನರುಜ್ಜೀವನಗೊಳಿಸುತ್ತಿರುವುದಕ್ಕೆ ಅವರು ಹಾರೈಸಿದರು.
ಇದೇ ಸಂದರ್ಭದಲ್ಲಿ ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ನೀರಾಜನ’ ದೈವ-ದೇವರ ಭಕ್ತಿ ಸಂಕಲನವನ್ನು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಂಸ್ಥಾಪಕ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಕುತ್ತಿಕಾರ್ ಅನಾವರಣಗೊಳಿಸಿದರು. ಕೃತಿಯ ಪರಿಚಯ ಮಾಡಿದ ಮೈಸೂರಿನ ಸಿಐಐಎಲ್‌ನ ನಿಕಟಪೂರ್ವ ಯೋಜನಾ ನಿರ್ದೇಶಕ ಡಾ. ಬಿ. ಶಿವರಾಮ ಶೆಟ್ಟಿ, "ನೀರಾಜನ ಕೃತಿಯು ಶೈವ, ವೈಷ್ಣವ, ಗಾಣಪತ, ಶಾಕ್ತ ಪರಂಪರೆಯ ದೇವರುಗಳ ಜೊತೆಗೆ ತುಳುನಾಡಿನ ಜನಪದೀಯ ದೈವ ಹಾಗೂ ನಾಗ ಆರಾಧನೆಯ ಸ್ತುತಿ ಗೀತೆಗಳನ್ನು ಒಳಗೊಂಡ ದ್ವಿಭಾಷಿಕ ಸಂಕಲನವಾಗಿದ್ದು, ದೇವಾಲಯ ಮತ್ತು ಪೂಜಾ ಮಂದಿರಗಳಲ್ಲಿ ಹಾಡಲು ಅತ್ಯಂತ ಯೋಗ್ಯವಾಗಿದೆ" ಎಂದರು.
ಕೃತಿಕರ್ತ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದರು. ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿ, ಕಲ್ಲೂರು ನಾಗೇಶ್ ಧನ್ಯವಾದ ಸಮರ್ಪಿಸಿದರು. ನಿತಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ‘ಪುರಾಣ ಲೋಕ’ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಸಂತಕವಿ ಕನಕದಾಸರ 'ನಳ ಚರಿತ್ರೆ' ಕಾವ್ಯವನ್ನು ಯಕ್ಷಗಾನ ಭಾಗವತ ದೇವಿ ಪ್ರಸಾದ ಆಳ್ವ ತಲಪಾಡಿ ಹಾಗೂ ಹರಿಕಥಾ ವಿದುಷಿ ಮಂಜುಳಾ ಜಿ. ರಾವ್ ಇರಾ ವಾಚಿಸಿದ್ದು, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದ್ದಾರೆ. ಈ ಕಾರ್ಯಕ್ರಮವು ಆಗಸ್ಟ್ 9ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9:00 ಗಂಟೆಗೆ 'ನಮ್ಮ ಕುಡ್ಲ' ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಮಂಗಳವಾರ ರಾತ್ರಿ 9:30ಕ್ಕೆ ಮರುಪ್ರಸಾರಗೊಳ್ಳಲಿದೆ.