ಮಂಗಳೂರು: ನಗರದ ಎಕ್ಕೂರು ಅಯ್ಯಪ್ಪ ಭಜನಾ ಮಂದಿರದ ಹಿಂದುಗಡೆ ಇರುವ ಕೆಲವು ಮನೆಗಳಿಗೆ ಒಳಚರಂಡಿ (ಡ್ರೈನೇಜ್) ಸಮಸ್ಯೆಯಿಂದ ತೀವ್ರ ತೊಂದರೆಯಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯರ ಸಭೆ ಜರುಗಿತು.
ಸ್ಥಳೀಯರ ಪರವಾಗಿ ಹಾಜರಿದ್ದ ಎಕ್ಕೂರು ನಿವಾಸಿ ತನುಜಾ ಅವರು, ಅಲ್ಲಿನ ಹತ್ತಾರು ಮನೆಗಳು ಒಳಚರಂಡಿ ಸಮಸ್ಯೆಯಿಂದ ಅನುಭವಿಸುತ್ತಿರುವ ತೊಂದರೆಗಳನ್ನು ಸಭೆಗೆ ವಿವರವಾಗಿ ತಿಳಿಸಿದರು. ಸ್ಥಳೀಯರ ಗೋಳನ್ನು ಆಲಿಸಿದ ಶಾಸಕರು ಕೂಡಲೇ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ವರದಿ ತಯಾರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ (ಅಭಿವೃದ್ಧಿ) ನರೇಶ್ ಶೆಣೈ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಶಿವಲಿಂಗಪ್ಪ, ಸಹಾಯಕ ಎಂಜಿನಿಯರ್ (AE) ಪ್ರಿಯಾಂಕ ಹಾಗೂ ಕುಡ್ಸೆಂಪ್ (KUDCEMP) ಅಧಿಕಾರಿಗಳಾದ ಜಯಪ್ರಕಾಶ್, ಸುರೇಶ್, ಶಿವರಾಮ್, ಸಂಪತ್, ವೆಂಕಟರಮಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.